ಚಿತ್ರರಂಗದ ಇಂದಿನ ಸ್ಥಿತಿಗತಿ ಬಗ್ಗೆ ಸುಮಂತ್ ಶೈಲೇಂದ್ರ ಪ್ರತಿಕ್ರಿಯಿಸಿದ್ದು ಹೀಗೆ

in ಮನರಂಜನೆ/ಸಿನಿಮಾ 1,746 views

ಕೊರೊನಾ ಭೀತಿ ಕಡಿಮೆಯಾಗದಿದ್ದರೂ ಎಂದಿನಂತೆ ಜನಜೀವನ ನಡೆಯುತ್ತಿದೆ. ಚಿತ್ರರಂಗದ ಚಟುವಟಿಕೆಗಳು ಕೂಡಾ ಮೊದಲಿನಂತೆ ಆರಂಭವಾಗಿದೆ. ಇದಕ್ಕೂ ಮುನ್ನ ಚಿತ್ರರಂಗದಲ್ಲಿ ಶೇ 50 ರಷ್ಟು ಸೀಟು ಭರ್ತಿಗೆ ಅವಕಾಶ ನೀಡಲಾಗಿತ್ತು. ಅದರೆ ಕಳೆದ ಒಂದು ತಿಂಗಳಿಂದ ಚಿತ್ರಮಂದಿರದಲ್ಲಿ ಪ್ರೇಕ್ಷಕರು ಮೊದಲಿನಂತೆ  ಕೂತು ಸಿನಿಮಾ ನೋಡಬಹುದಾಗಿದೆ. ಈ ನಡುವೆ ಕೊರೊನಾ ಭೀತಿ ಆರಂಭವಾದಾಗಿನಿಂದ ಬಹುತೇಕ ಸಿನಿಮಾಗಳು ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಿತ್ತು. ಇದು ಹೀಗೇ ಮುಂದುವರೆದರೆ ಥಿಯೇಟರ್ಗಳ ಗತಿ ಏನು ಎಂಬ ಭಯ ಕೂಡಾ ಚಿತ್ರರಂಗವನ್ನು ಕಾಡಿತ್ತು. ಜನರು ಬರುತ್ತಾರೋ ಇಲ್ಲವೋ ಎಂಬ ಅಳುಕಿನಿಂದ ತಮ್ಮ ಸಿನಿಮಾಗಳ ಬಿಡುಗಡೆ ದಿನಾಂಕವನ್ನು ಮುಂದಕ್ಕೆ ಹಾಕಿದ್ದ ನಿರ್ಮಾಪಕರು ಕೂಡಾ ಈಗ ಯಾವುದೇ ಭಯ ಇಲ್ಲದೆ ಸಿನಿಮಾ ಬಿಡುಗಡೆ ಮಾಡುತ್ತಿದ್ದಾರೆ.  ಜನರು ಕೂಡಾ ಎಂದಿನಂತೆ ಕುಟುಂಬದೊಂದಿಗೆ, ಸ್ನೇಹಿತರೊಂದಿಗೆ ಚಿತ್ರಮಂದಿರಗಳಿಗೆ ಬಂದು ಸಿನಿಮಾ ನೋಡುತ್ತಿದ್ದಾರೆ. ಇದಕ್ಕೆ ಸಾಕ್ಷಿ ಕಳೆದ ವಾರ ಬಿಡುಗಡೆಯಾದ  ‘ಪೊಗರು’ ಸಿನಿಮಾ.ಫೆಬ್ರವರಿ 19 ಈ ಸಿನಿಮಾ ಬಿಡುಗಡೆಯಾಗುವ ದಿನ ಬೆಳಗ್ಗೆ  ನರ್ತಕಿ ಚಿತ್ರಮಂದಿರದ ಮುಂದೆ ಅಭಿಮಾನಿಗಳ ಸಂತೆ ನೆರೆದಿತ್ತು. ಲಾಕ್ಡೌನ್ ತೆರವುಗೊಳಿಸಿದ ನಂತರ ಇಷ್ಟು ದೊಡ್ಡ ಮಟ್ಟಿಗಿನ ಓಪನಿಂಗ್ ಸಿಕ್ಕಿದ್ದು ಪೊಗರು ಸಿನಿಮಾಗೆ ಮಾತ್ರ ಎನ್ನಬಹುದು.  ಈ ವಿಚಾರಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ವುಡ್ ನಟ, ದಿಲ್ವಾಲಾ ಖ್ಯಾತಿಯ ಸುಮಂತ್ ಶೈಲೇಂದ್ರ ಸಂತೋಷ ವ್ಯಕ್ತಪಡಿಸಿದ್ದಾರೆ.

Advertisement

Advertisement

 

Advertisement

ಥಿಯೇಟರ್ಗಳು ಓಪನ್ ಆಗಿ, ಜನರು ಮೊದಲಿನಂತೆ ಚಿತ್ರಮಂದಿರತ್ತ ಬರುತ್ತಿರುವುದಕ್ಕೆ ಸುಮಂತ್ ಖುಷಿಯಾಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿರುವ ಸುಮಂತ್, “ನಿಮಗೆ ನನ್ನ ನಮನ , ಕೊರೊನಾ ನಂತರ ನಮಗೆ ಚಿಂತೆ ಆಗಿತ್ತು. ಕನ್ನಡ ಚಿತ್ರರಂಗದ ‌ಋಣದಲ್ಲಿ‌ ಇರುವ ನಮ್ಮ ಸ್ಥಿತಿ ಮುಂದೆ ಏನು ಅಂತ ಯೋಚನೆ ಆಗಿತ್ತು. ಅದರಲ್ಲೂ ಈ‌ ಒಟಿಟಿ ಅಬ್ಬರ ನೋಡಿ ಒಂದು ಕ್ಷಣ ಭಯ ಆಗಿತ್ತು,‌ ಆದರೆ ಸಿನಿಮಾ ಒಂದೊಂದಾಗಿ ಬಿಡುಗಡೆ ಆದ‌ ನಂತರ ನಿಮ್ಮ ಪ್ರತಿಕ್ರಿಯೆ ನೋಡಿ ಅದರಲ್ಲೂ ‘ಪೊಗರು’ ಅಂತಹ ದೊಡ್ಡ ಬಜೆಟ್ ಸಿನಿಮಾಗೆ ನೀವು ನೀಡಿದ‌ ಪ್ರೋತ್ಸಾಹ ನೋಡಿ ಜೀವ ಮತ್ತೆ ಬಂದ ಅನುಭವವಾಗುತ್ತಿದೆ. ಅದಕ್ಕೆ ಅಣ್ಣಾವ್ರು ಹೇಳಿರೊದು, ಅಭಿಮಾನಿ ದೇವರುಗಳು ಅಂತ, ಖಂಡಿತ ನೀವು ನಮ್ಮ ಪಾಲಿನ ಅಭಿಮಾನಿ ದೇವರುಗಳೇ
ಮಾರ್ಚ್ 1 ಕ್ಕೆ ನಾನು ನಟಿಸಿರುವ ‘ಗೋವಿಂದ ಗೋವಿಂದ’ ಸಿನಿಮಾ ಟೀಸರ್ ಬರ್ತಿದೆ ನೋಡಿ ಹಾರೈಸಿ” ಎಂದು ಸುಮಂತ್ ಶೈಲೇಂದ್ರ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

Advertisement

ಶೈಲೇಂದ್ರ ಪ್ರೊಡಕ್ಷನ್ಸ್, ಎಲ್.ಜಿ. ಕ್ರಿಯೇಶನ್ಸ್ ಮತ್ತು ರವಿ ಗರಣಿ ಪ್ರೊಡಕ್ಷನ್ಸ್ ಮೂವರೂ ಜೊತೆ ಸೇರಿ ‘ಗೋವಿಂದ ಗೋವಿಂದ’ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ತಿಲಕ್, ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇದು ತಿಲಕ್ ನಿರ್ದೇಶನದ ಮೊದಲ ಸಿನಿಮಾ. ಚಿತ್ರದ ಸ್ಯಾಟಲೈಟ್‌ ರೈಟ್ಸ್ ಈಗಾಗಲೇ ಉತ್ತಮ ಮೊತ್ತಕ್ಕೆ ಮಾರಾಟವಾಗಿದ್ದು  ಯಾವುದೇ ಕಟ್, ಮ್ಯೂಟ್ ಇಲ್ಲದೆ ಚಿತ್ರಕ್ಕೆ ಯು ಪ್ರಮಾಣ ಪತ್ರ ಕೂಡಾ ದೊರೆತಿದೆ. ಚಿತ್ರದಲ್ಲಿ ಸುಮಂತ್ ಶೈಲೇಂದ್ರ ಜೊತೆಗೆ ಭಾವನಾ, ಕವಿತಾ ಗೌಡ, ರೂಪೇಶ್ ಶೆಟ್ಟಿ, ಅಚ್ಯುತ್‌ ಕುಮಾರ್, ಶೋಭರಾಜ್, ವಿ. ಮನೋಹರ್, ಪವನ್, ವಿಜಯ್‌ ಚೆಂಡೂರ್ ಹಾಗೂ ಇನ್ನಿತರರು ನಟಿಸಿದ್ದಾರೆ. ಸಿನಿಮಾದ ಫಸ್ಟ್ಲುಕ್ ಕೂಡಾ ಬಿಡುಗಡೆಯಾಗಿದೆ. ಚಿತ್ರಕ್ಕೆ ಕೆ.ಎಸ್. ಚಂದ್ರಶೇಖರ್‌ ಛಾಯಾಗ್ರಹಣ, ಸಿ. ರವಿಚಂದ್ರನ್ ಸಂಕಲನ, ಹಿತನ್ ಹಾಸನ್ ಸಂಗೀತ, ದೇವ್‌ರಂಗಭೂಮಿ ಸಂಭಾಷಣೆ, ಡಾ. ಥ್ರಿಲ್ಲರ್ ಮಂಜು ಸಾಹಸ ಇದೆ.

‘ಗೋವಿಂದ ಗೋವಿಂದ’  ಚಿತ್ರದಲ್ಲಿ ಒಟ್ಟು 6 ಹಾಡುಗಳಿದ್ದು ಹಿತನ್ ಸಂಗೀತ ನಿರ್ದೇಶಿಸಿದ್ದಾರೆ. ಮಾರ್ಚ್ 1 ರಂದು ಸಿನಿಮಾ ಟೀಸರ್ ಬಿಡುಗಡೆಯಾಗುತ್ತಿದೆ. 2017 ರಲ್ಲಿ ‘ಲೀ’ ಚಿತ್ರದ ನಂತರ ಸುಮಂತ್ ಮತ್ತೆ ಕನ್ನಡ ಸಿನಿಮಾಗಳಲ್ಲಿ ನಟಿಸಿರಲಿಲ್ಲ. 2018 ರಲ್ಲಿ ಬ್ರ್ಯಾಂಡ್ ಬಾಬು ಎಂಬ ತೆಲುಗು ಚಿತ್ರದಲ್ಲಿ ನಟಿಸಿದ್ದರು. ಕೆಲವೊಂದು ವೈಯಕ್ತಿಕ ಕಾರಣಗಳಿಂದ 2 ವರ್ಷಗಳಿಂದ ಸಿನಿಮಾಗಳಿಂದ ದೂರವಿದ್ದ ಸುಮಂತ್ ಈಗ ಗೋವಿಂದ ಗೋವಿಂದ ಚಿತ್ರದ ಮೂಲಕ ಕಂ ಬ್ಯಾಕ್ ಆಗಿದ್ದಾರೆ.

Advertisement