ಬ್ಯೂಟಿಫುಲ್ ಮನಸ್ಸಿನ ಚೆಲುವೆ ಯಾರಿವಳು?

in ಮನರಂಜನೆ/ಸಿನಿಮಾ 240 views

ಅರೇ ಯಾರಿವಳು? ಎಂದುಕೊಳ್ಳಬೇಡಿ. ಮುದ್ದು ಮುಖದ ಈ ಚೆಲುವೆಯ ಹೆಸರು ಸ್ವಾತಿ ಕೊಂಡೆ. ತುಮಕೂರಿನ ಬೆಡಗಿ ಸ್ವಾತಿ ಕೊಂಡೆ ಮಾಡೆಲಿಂಗ್ ಮೂಲಕ ಬಣ್ಣದ ನಂಟು ಶುರು ಮಾಡಿದರು. ಮಾಡೆಲಿಂಗ್ ನಂತರ ಸೀದಾ ಬೆಳ್ಳಿತೆರೆಗೆ ಹಾರಿದ ಚೆಲುವೆ ಬ್ಯೂಟಿಫುಲ್ ಮನಸುಗಳು ಎಂಬ ಸಿನಿಮಾದ ಮೂಲಕ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡರು. ಬ್ಯೂಟಿಫುಲ್ ಮನಸ್ಸುಗಳು ವಿನಲ್ಲಿ ಅಚ್ಯುತ್ ಕುಮಾರ್ ಮಗಳಾಗಿ ಅಭಿನಯಿಸಿ ಸೈ ಎನಿಸಿಕೊಂಡ ಈ ಚೆಲುವೆ ಇದೀಗ ಕಿರುತೆರೆಗೂ ಕಾಲಿಟ್ಟಾಗಿದೆ. ಹೌದು, ಉದಯ ವಾಹಿನಿಯಲ್ಲಿ ಇತ್ತೀಚೆಗಷ್ಟೇ ಆರಂಭವಾಗಿರುವ ಹೊಚ್ಚ ಹೊಸ ಧಾರಾವಾಹಿ ಯಾರಿವಳು ವಿನಲ್ಲಿ ನಾಯಕಿ ಮಾಯಾ ಆಗಿ ಸ್ವಾತಿ ಕೊಂಡೆ ಅಭಿನಯಿಸುತ್ತಿದ್ದಾರೆ. ಮೊದಲ ಧಾರಾವಾಹಿಯಲ್ಲಿಯೇ ಸೀರಿಯಲ್ ಪ್ರಿಯರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ ಸ್ವಾತಿ ಕೊಂಡೆ.

Advertisement

Advertisement

ಡಿಪ್ಲೋಮ ಪದವೀಧರೆ ಆಗಿರುವ ಸ್ವಾತಿಗೆ ಓದು ಮುಗಿದ ತಕ್ಷಣ ಸಿನಿಮಾದಲ್ಲಿ ನಟಿಸುವ ಅವಕಾಶ ದೊರಕಿತು‌. ದೊರೆತ ಅವಕಾಶವನ್ನು ಬೇಡ ಎನ್ನದ ಚೆಲುವೆ ಸ್ವಾತಿ ಬೆಳ್ಳಿತೆರೆಯ ಜೊತೆಗೆ ಕಿರುತೆರೆಯಲ್ಲಿಯೂ ಸದ್ದು ಮಾಡುತ್ತಿದ್ದಾರೆ. ಎಳವೆಯಿಂದಲೂ ನೃತ್ಯದಲ್ಲಿ ಪಳಗಿರುವ ಸ್ವಾತಿ ಯಾವುದೇ ನೃತ್ಯವಾದರೂ ಸರಿ ನೋಡಿದ ತಕ್ಷಣ ಕಲಿಯುವ ಬುದ್ದಿವಂತೆ. ಪಿಯುಸಿ ಓದುವಾಗಲೇ ಡ್ಯಾನ್ಸ್ ಶೋ ಮಾಡುವ ಹಂಬಲ ಇದ್ದ ಸ್ವಾತಿಗೆ ನಟಿಸುವ ಅವಕಾಶ ಬಂತು. ಹೀಗಾಗಿ ಹಿಂದೆ ಸರಿದರು.

Advertisement

ಮುಂದೆ ಬ್ಯೂಟಿಫುಲ್ ಮನಸ್ಸುಗಳು ಮೂಲಕ ನಟನಾ ಪಯಣ ಶುರು ಮಾಡಿದ್ದ ಸ್ವಾತಿ ಆರು ವರ್ಷಗಳಿಂದ ಸಿನಿರಂಗದಲ್ಲಿ ಸಕ್ರಿಯರಾಗಿರುವ ಚೆಲುವೆ. ಬ್ಯೂಟಿಫುಲ್‌ ಮನಸ್ಸುಗಳು ವಿನ ನಂತರ ಸ್ವಾತಿ ಕಮರೊಟ್ಟು ಚೆಕ್ ಪೋಸ್ಟ್ , ವೆನಿಲ್ಲಾ , ಕಟ್ಟುಕತೆ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ ಈಕೆ ಇದೀಗ ಯಾರಿವಳು ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದಾರೆ. ಮುಖ್ಯವಾದ ವಿಚಾರವೆಂದರೆ ಯಾರಿವಳು ಧಾರಾವಾಹಿಯಲ್ಲಿ ಸ್ವಾತಿ ಕೊಂಡೆ ದ್ವಿಪಾತ್ರದಲ್ಲಿ ನಟಿಸಿದ್ದಾರೆ.

Advertisement

” ಯಾವುದೇ ಕಲಾವಿದನಾದರೂ ಸರಿ, ಕಿರುತೆರೆ, ಸಿನಿಮಾ ಎಂದು ಭೇದ ಭಾವ ಇರಬಾರದು. ನಟಿಸುವ ಅವಕಾಶ ದೊರೆತರೆ ಸಾಕು ಅಷ್ಟೇ! ಹಾಗೇ ನೋಡಿದರೆ ಸಿನಿಮಾಗಳಿಂದ ಹೆಚ್ಚು ಧಾರಾವಾಹಿ ಮೂಲಕ ಜನರಿಗೆ ಪರಿಚಿತರಾಗುತ್ತೇವೆ. ಮುಂದೆಯೂ ಅಷ್ಟೇ ನಾನು ಕಿರುತೆರೆ ಬೆಳ್ಳಿತೆರೆ ನಾನು ಎರಡರಲ್ಲಿಯೂ ನಟಿಸುತ್ತೇನೆ.
ನಟನೆ ಎಂಬುದು ಶಿಕ್ಷಣ ಇದ್ದಂತೆ. ಬೇರೆ ಬೇರೆ ವಿಷಯಗಳನ್ನು ತರಗತಿಯಲ್ಲಿ ಕಲಿಯುವುದು ಮಾಮುಲಿ. ಅದೇ ರೀತಿ ನಟನೆಯಲ್ಲಿಯೂ ಅನೇಕ ವಿಷಯಗಳು ಇರುತ್ತದೆ. ಅದನ್ನು ನಾವು ಪ್ರತಿದಿನ ಕಲಿಯುತ್ತೇವೆ. ಆ ಮೂಲಕ ನಟನೆಯಲ್ಲಿ ಪದವಿ ಗಳಿಸುತ್ತೇವೆ” ಎನ್ನುತ್ತಾರೆ ಸ್ವಾತಿ ಕೊಂಡೆ.

ಇಬ್ಬರು ಅವಳಿ ಹೆಣ್ಣುಮಕ್ಕಳ ಸುತ್ತ ನಡೆಯುವ ಕಥೆಯೇ ಯಾರಿವಳು ಧಾರಾವಾಹಿಯ ಕಥಾ ಹಂದರ. ಅಹಲ್ಯಾ ಹಾಗೂ ಮಾಯಾ ನೋಡಲು ಒಂದೇ ರೀತಿ ಆದರೂ ವ್ಯಕ್ತಿತ್ವ ತದ್ವಿರುದ್ದ. ಮಾಯಾ ಪಾತ್ರದಲ್ಲಿ ನವರಸಗಳಿವೆ. ಕೋಪ , ಕರುಣೆ ,ಸಹನೆ ಎಲ್ಲವೂ ಅಡಕಗೊಂಡಿದೆ‌. ಅಹಲ್ಯಾ ಪಾತ್ರದಲ್ಲಿ ಕರುಣೆ ,ಸಹನೆ ,ಪ್ರೀತಿ ಇವಿಷ್ಟೇ! ಸದ್ಯ ಮಾಯಾ ಆಗಿಯೇ ತೆರೆ ಮೇಲೆ ಕಾಣಿಸಿಕೊಳ್ಳುತ್ತಿರುವ ಈಕೆ ರಗಡ್ ಲುಕ್​​​​​​​​​​​​​​ನಲ್ಲಿ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದಾರೆ. ಆಂಜನೇಯನ ಪರಮ ಭಕ್ತೆಯಾಗಿರುವ ಮಾಯಾ ಯಾವುದೇ ಕೆಲಸವನ್ನು ಮಾಡುವ ಮೊದಲು ಹನುಮನನ್ನು ನೆನೆದೇ ಮುಂದಿನ ಕಾರ್ಯಕ್ಕೆ ತಯಾರಾಗುವುದು. ಏನೇ ಆಗಲಿ ತುಂಬಾ ಧೈರ್ಯದಿಂದ ಮುನ್ನುಗ್ಗುವ ಮಾಯಾ ರಿಯಲ್ ಲೈಫ್​​​​​​​​ ಗೂ ರೀಲ್ ಲೈಫ್ ಗೂ ಕೊಂಚವೂ ವ್ಯತ್ಯಾಸ ಇಲ್ಲವೇ ಇಲ್ಲ!

ರಿಯಲ್ ಲೈಫ್ ನಲ್ಲೂ ಸ್ವಾತಿ ಮಾಯಾಳಂತೆ ಗಟ್ಟಿಗಿತ್ತಿ ಹೌದು. ಅದೇ ಕಾರಣದಿಂದ ಮಾಯಾ ಪಾತ್ರದಲ್ಲಿ ನಟಿಸುವಾಗ ಕಷ್ಟವಾಗಲಿಲ್ಲ. ಆದರೆ ಅಹಲ್ಯಾ ಪಾತ್ರ ನನಗೆ ಕೊಂಚ ಕಷ್ಟವಾಗಬಹುದು. ಆದರೆ ನ್ಯಾಯ ಒದಗಿಸಲು ಪ್ರಯತ್ನಿಸುತ್ತೇನೆ ಎಂಬುದು ಸ್ವಾತಿ ಉವಾಚ. ಇದರ ಜೊತೆಗೆ ಮೂರು ಸಿನಿಮಾಗಳ ಮಾತುಕತೆ ನಡೆದಿದ್ದು ಕೊರೋನಾದಿಂದಾಗಿ ನಿಂತಿದೆ. ನಟಿಯಾಗದಿದ್ದರೆ ಅಪ್ಪನ ಆಸೆಯಂತೆ ಆರ್ ಟಿ ಓ ಅಧಿಕಾರಿಯಾಗಿರುತ್ತಿದ್ದೆ. ಈ ಕ್ಷೇತ್ರದಲ್ಲಿ ಮುಂದುವರಿಯಲು ಮನೆಯವರ ಸಹಕಾರ ಇದೆ ಎನ್ನುತ್ತಾರೆ.
– ಅಹಲ್ಯಾ.

Advertisement
Share this on...