ಕನ್ನಡ ಕಿರುತೆರೆಯ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟ ಹಲವರು ಇಂದು ಕೇವಲ ಕನ್ನಡ ಕಿರುತರೆ ಮಾತ್ರವಲ್ಲದೇ ಪರಭಾಷೆಯ ಕಿರುತೆರೆಯಲ್ಲಿಯೂ ಮೋಡಿ ಮಾಡುತ್ತಿದ್ದಾರೆ. ರಶ್ಮಿ ಪ್ರಭಾಕರ್, ಚಂದು ಗೌಡ, ನೇಹಾ ಗೌಡ, ರಕ್ಷಾ, ರಕ್ಷಾ ಹೊಳ್ಳ, ಭೂಮಿ ಶೆಟ್ಟಿ, ಆಕರ್ಷ್, ಪ್ರಿಯದರ್ಶಿನಿ ಗೌಡ, ದೀಪ್ತಿ ಮನ್ನೆ, ಮೇಘನಾ, ಶೋಭಾ ಶೆಟ್ಟಿ, ಚೈತ್ರಾ ರೈ, ಮಾನ್ಸಿ ಜೋಷಿ, ಐಶ್ವರ್ಯಾ ಸಾಲಿಮಠ್ ಹೀಗೆ ಸಾಲು ಸಾಲು ಕನ್ನಡ ಕಲಾವಿದರುಗಳು ಪರಭಾಷೆಯ ಕಿರುತೆರೆಯಲ್ಲಿ ನಟಿಸುವ ಮೂಲಕ ಅಲ್ಲೂ ನಟನಾ ಛಾಪನ್ನು ಮೂಡಿಸುತ್ತಿದ್ದಾರೆ. ಇದೀಗ ಆ ಸಾಲಿಗೆ ಮಗದೋರ್ವ ಕನ್ನಡತಿಯ ಸೇರ್ಪಡೆಯಾಗಿದೆ. ಅದು ಬೇರಾರೂ ಅಲ್ಲ ದೀಪಿಕಾ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಕುಲವಧುವಿನಲ್ಲಿ ನಾಯಕಿ ಧನ್ಯಾಳಾಗಿ ಅಭಿನಯಿಸಿದ್ದ ದೀಪಿಕಾ ಇದೀಗ ತೆಲುಗು ಕಿರುತೆರೆಗೆ ಕಾಲಿಟ್ಟಿದ್ದಾರೆ.ತೆಲುಗು ಧಾರಾವಾಹಿ ಇಂಟಕಿ ದೀಪ ಇಲ್ಲಾಲು ವಿನಲ್ಲಿ ಪ್ರಮುಖ ಪಾತ್ರದಲ್ಲಿ ದೀಪಿಕಾ ಕಾಣಿಸಿಕೊಳ್ಳುತ್ತಿದ್ದಾರೆ. ಅಂದ ಹಾಗೇ ಇದೇ ಮೊದಲ ಬಾರಿಗೆ ದೀಪಿಕಾ ತೆಲುಗು ಕಿರುತೆರೆಯಲ್ಲಿ ಅಭಿನಯಿಸುತ್ತಿದ್ದು ಮೊದಲ ತೆಲುಗು ಧಾರಾವಾಹಿಯಲ್ಲಿಯೇ ನಾಯಕಿ ಪಟ್ಟವನ್ನು ಪಡೆದುಕೊಂಡಿದ್ದಾರೆ.
ಧಾರಾವಾಹಿಯ ಪ್ರೋಮೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಈ ಸಂತಸದ ವಿಚಾರವನ್ನು ತಿಳಿಸಿದ ದೀಪಿಕಾ “ಮಗದೊಂದು ಹೊಸ ಹೆಜ್ಜೆ ಇಟ್ಟಿದ್ದೇನೆ. ಇಷ್ಟು ದಿನಗಳ ಕಾಲ ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದದಿಂದ ನನ್ನನ್ನು ಬೆಳೆಸಿದ್ದೀರಿ. ಇನ್ನು ಮುಂದೆಯೂ ನಿಮ್ಮ ಪ್ರೀತಿ ಹಾಗೂ ಆಶೀರ್ವಾದ ಸದಾ ನನ್ನ ಮೇಲಿರಲಿ” ಎಂದು ಬರೆದುಕೊಂಡಿದ್ದಾರೆ.
ಬಾಲ್ಯದಿಂದಲೂ ನಟಿಯಾಗಬೇಕು ಎಂಬ ಬಯಕೆ ಹೊಂದಿದ್ದ ದೀಪಿಕಾ ಪದವಿಯ ನಂತರ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕುಲವಧು ಧಾರಾವಾಹಿಗೆ ಆಡಿಶನ್ ನಡೆಯುತ್ತಿದ್ದ ಸಮಯದಲ್ಲಿ ಸ್ನೇಹಿತೆಯ ಒತ್ತಾಯದ ಮೇರೆಗೆ ಹೋದ ದೀಪಿಕಾ ಆಯ್ಕೆ ಆಗಿದ್ದರು. ಅದು ಕೂಡಾ ಮುಖ್ಯ ಪಾತ್ರಕ್ಕೆ!
“ಮೊದಲ ಧಾರಾವಾಹಿಯಲ್ಲಿಯೇ ನಾಯಕಿಯಾಗಿ ಮುಕಲ್ಯ ಪಾತ್ರದಲ್ಲಿ ನಟಿಸುವ ಸುವರ್ಣಾವಕಾಶ ಎಲ್ಲರಿಗೂ ಸಿಗುವುದಿಲ್ಲ. ಆದರೆ ಅದು ನನಗೆ ದೊರಕಿದೆ. ನಾನು ಪುಣ್ಯ ಎಂದೆನಿಸುತ್ತದೆ” ಎಂದು ಹೇಳುವ ದೀಪಿಕಾ ಕುಲವಧು ಧಾರಾವಾಹಿಯ ಧನ್ಯಾ ಆಗಿಯೇ ಇಂದಿಗೂ ಫೇಮಸ್ಸು. ಬರೋಬ್ಬರಿ ನಾಲ್ಕು ವರ್ಷಗಳ ಕಾಲ ಧನ್ಯಾ ಆಗಿ ವೀಕ್ಷಕರ ಮನರಂಜಿಸಿದ ದೀಪಿಕಾ ಧಾರಾವಾಹಿ ಮುಗಿದು ವರ್ಷಗಳಾದರೂ ಅದೇ ಹೆಸರಿನಿಂದ ಜನಪ್ರಿಯತೆ ಪಡೆದಿದ್ದಾರೆ.
ಕುಲವಧು ಧಾರಾವಾಹಿಯ ನಂತರ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಆರತಿಗೊಬ್ಬ ಕೀರ್ತಿಗೊಬ್ಬ ಧಾರಾವಾಹಿಯಲ್ಲಿ ಆರತಿಯಾಗಿ ನಟಿಸುವ ಮೂಲಕ ಕಿರುತೆರೆಗೆ ಕಂಬ್ಯಾಕ್ ಆದ ಆಕೆ ಅಭಿನಯಕ್ಕೆ ಮನಸೋಲದವರಿಲ್ಲ. ಮನೋಜ್ಞ ನಟನೆಯ ಮೂಲಕ ವೀಕ್ಷಕರ ಮನದಲ್ಲಿ ಶಾಶ್ವತ ಸ್ಥಾನ ಪಡೆದ ಆಕೆ ಮುಂದೆ ಬದಲಾದುದು ಸೇವಂತಿಯಾಗಿ.
ಪ್ರಸ್ತುತ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೇವಂತಿ ಧಾರಾವಾಹಿಯಲ್ಲಿ ನಾಯಕಿ ಸೇವಂತಿಯಾಗಿ ನಟಿಸುತ್ತಿರುವ ಬೆಳ್ಳಿತೆರೆಗೂ ಕಾಲಿಟ್ಟಾಗಿದೆ. ನನ್ನ ಮಗಳೇ ಹಿರೋಯಿನ್ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿರುವ ದೀಪಿಕಾ
ಇದೇ ಮೊದಲ ಬಾರಿ ತೆಲುಗು ಕಿರುತೆರೆಗೆ ಕಾಲಿಡಲಿದ್ದು ಅಲ್ಲೂ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗುತ್ತಾರಾ ಎಂದು ಕಾದುನೋಡಬೇಕಾಗಿದೆ.
– ಅಹಲ್ಯಾ