ನಟಿ ಮಾತ್ರವಲ್ಲ ಈಕೆ ನಿರೂಪಕಿಯೂ ಹೌದು

in ಮನರಂಜನೆ/ಸಿನಿಮಾ 465 views

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಂಗಳ ಗೌರಿ ಮದುವೆ ಧಾರಾವಾಹಿಯಲ್ಲಿ ನಾಯಕ ರಾಜೀವನ ಅತ್ತಿಗೆ ಸೌಂದರ್ಯ ಆಗಿ ಅಭಿನಯಿಸುತ್ತಿದ್ದ ರಾಧಿಕಾ ಮಿಂಚು ಇದ್ದಕ್ಕಿದ್ದಂತೆ ಪಾತ್ರಕ್ಕೆ ಬಾಯ್ ಹೇಳಿದಾಗ ಆ ಜಾಗಕ್ಕೆ ಬಂದ ಚೆಲುವೆಯೇ ತನಿಷಾ ಕುಪ್ಪಂಡ. ಸೌಂದರ್ಯ ಆಗಿ ಕಿರುತೆರೆ ಲೋಕದಲ್ಲಿ ಮಿಂಚುತ್ತಿರುವ ತನಿಷಾಗೆ ನಟನಾ ಲೋಕ ತೀರಾ ಹೊಸದೇನಲ್ಲ. ಮಂಗಳ ಗೌರಿ ಮದುವೆ ಧಾರಾವಾಹಿಯ ಸೌಂದರ್ಯ ಆಗಿ ಅಭಿನಯಿಸುವ ಮೊದಲು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸತ್ಯಂ ಶಿವಂ ಸುಂದರಂ ಧಾರಾವಾಹಿಯಲ್ಲಿ ತಾಪ್ಸಿ ಎನ್ನುವ ನೆಗೆಟಿವ್ ರೋಲ್ ನಲ್ಲಿ ನಟಿಸಿ ಅಲ್ಲೂ ಸೈ ಎನಿಸಿಕೊಂಡಿದ್ದರು. ಬಾಲ್ಯದಿಂದಲೂ ನಟನಾ ಕ್ಷೇತ್ರ ಎಂದರೆ ಒಂದು ರೀತಿಯ ವಿಶೇಷ ಒಲವು ಹೊಂದಿದ್ದ ತನಿಷಾಗೆ ನಟನಾ ಕ್ಷೇತ್ರದಲ್ಲಿಯೇ ಬದುಕು ಕಟ್ಟಿಕೊಳ್ಳುವ ಮಹಾದಾಸೆ.

Advertisement

Advertisement

ಬಿಬಿಎಂ ಪದವಿ ಪಡೆದಿರವ ತನಿಷಾ ಅವರ ಬಣ್ಣದ ಲೋಕಕ್ಕೆ ಮುನ್ನುಡಿ ಬರೆದುದು ಹಿರಿತೆರೆ. ಬಣ್ಣದ ಲೋಕದಲ್ಲಿ ದೂದ್ ಪೇಡಾ ಎಂದೇ ಮನೆ ಮಾತಾಗಿರುವ ದಿಗಂತ್ ಅಭಿನಯದ ಪಾರಿಜಾತ ಸಿನಿಮಾದಲ್ಲಿ ದಿಗಂತ್ ತಂಗಿಯಾಗಿ ನಟಿಸುವ ಮೂಲಕ ಬಣ್ಣದ ಪಯಣ ಶುರು ಮಾಡಿರುವ ತನಿಷಾ ಕುಪ್ಪಂಡಾ ಮತ್ತೆ ಹಿಂತಿರುಗಿ ನೋಡಿದ್ದೇ ಇಲ್ಲ! ಮುಂದೆ ರೊಮಿಯೋ, ದೇವ್ ಸನ್ ಆಫ್ ಮುದ್ದೇಗೌಡ, ಗೋಕುಲ ಕೃಷ್ಣ, ಮೇಘಾ ಆಲಿಯಾಸ್ ಮ್ಯಾಗಿ ಸಿನಿಮಾಗಳಲ್ಲಿ ನಟಿಸಿರುವ ತನಿಷಾ ಬೆಳ್ಳಿತೆರೆಯ ಮತ್ತೆ ಕಿರುತೆರೆಯಲ್ಲೂ ನಟನಾ ಕಂಪನ್ನು ಪಸರಿಸಿದರು.

Advertisement

ಮಾಯಾ, ಸರಯೂ, ಸಾಕ್ಷಿ, ದುರ್ಗಾ, ಪ್ರೀತಿ ಎಂದರೇನು, ಪುಟ್ಮಲ್ಲಿ, ಅಶ್ವಿನಿ ನಕ್ಷತ್ರ, ಓಂ ಶಕ್ತಿ ಓಂ ಶಾಂತಿ, ವಾರಸ್ದಾರ ಧಾರಾವಾಹಿಗಳಲ್ಲಿ ಅಭಿನಯಿಸಿರುವ ತನಿಷಾ ಕುಪ್ಪಂಡ ಹೆಚ್ಚಾಗಿ ಕಾಣಿಸಿಕೊಂಡಿದ್ದು ನೆಗೆಟಿವ್ ಪಾತ್ರಗಳಲ್ಲಿಯೇ!  ಸತ್ಯಂ ಶಿವಂ ಸುಂದರಂ ನ ತಾಪ್ಸಿ ಪಾತ್ರದಿಂದಲೇ ಇತ್ತೀಚೆಗೆ ಕಿರುತೆರೆಯಲ್ಲಿ ಫೇಮಸ್ ಆದ ತನಿಷಾ ಇದೀಗ ಮಂಗಳ ಗೌರಿಯ ಸೌಂದರ್ಯ ಆಗಿ ಮತ್ತೆ ವೀಕ್ಷಕರನ್ನು ರಂಜಿಸಲು ಬಂದಿದ್ದಾರೆ. ಇದರ ಜೊತೆಗೆ ತಮಿಳು ಧಾರಾವಾಹಿ ನೀಲಿಯಲ್ಲಿ ನಟಿಸುವ ಮೂಲಕ ಪರಭಾಷೆಯಲ್ಲಿಯೂ ನಟನಾ ಛಾಪನ್ನು ಪಸರಿಸಿದ್ದಾರೆ ತನಿಷಾ.

Advertisement

ನೀಲಿ ಧಾರಾವಾಹಿಯಲ್ಲಿ ತುಳಸಿ ಪಾತ್ರಕ್ಕೆ ಜೀವ ತುಂಬಿರುವ ಇವರು ನಿರೂಪಕರಾಗಿಯೂ ಮನೆ ಮಾತಾಗಿದ್ದಾರೆ. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನಗ್ಸೋ ಚಾಲೆಂಜ್ ಕಾರ್ಯಕ್ರಮದ ನಿರೂಪಕಿಯಾಗಿಯೂ ವೀಕ್ಷಕರ ಮನ ಸೆಳೆದಿದ್ದಾರೆ ತನಿಷಾ. ಒಟ್ಟಿನಲ್ಲಿ ಸದ್ಯ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ತನಿಷಾ ಉತ್ತಮ ಕಥೆ ದೊರೆತರೆ ಬೆಳ್ಳಿತೆರೆಯಲ್ಲೂ ಮಿಂಚಬಹುದು. ಇದರ ಜೊತೆಗೆ ಬಣ್ಣದ ಲೋಕವನ್ನೇ ನೆಚ್ಚಿ ಬಂದಿರುವ ಈಕೆಯ ನಟನಾ ಪಯಣ ಕಲರ್ ಫುಲ್ ಆಗಿ ಸಾಗಲಿ ಎಂದೇ ಹಾರೈಕೆ.
– ಅಹಲ್ಯಾ

Advertisement
Share this on...