ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಾಧಾ ರಮಣ ಧಾರಾವಾಹಿಯಲ್ಲಿ ನಾಯಕಿ ಆರಾಧನಾಳಾಗಿ ಸೀರಿಯಲ್ ಪ್ರಿಯರ ಅದರಲ್ಲೂ ಹೆಂಗಳೆಯರ ಮನ ಗೆದ್ದ ಶ್ವೇತಾ ಪ್ರಸಾದ್ ಈಗಾಗಲೇ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿರುವ ವಿಚಾರ ವೀಕ್ಷಕರಿಗೆ ತಿಳಿದೇ ಇದೆ. ಕಿರಿಕ್ ಕೀರ್ತಿ ನಿರ್ದೇಶನದ ಪ್ರೀತಿ ಮದುವೆ ಇತ್ಯಾದಿ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಕಂ ಬ್ಯಾಕ್ ಆದ ಶ್ವೇತಾ ಪ್ರಸಾದ್ ಇದೀಗ ಮಗದೊಂದು ಸಿಹಿಸುದ್ದಿ ನೀಡಿದ್ದಾರೆ. ಅರೇ, ಅದೇನಂತೀರಾ, ಶ್ವೇತಾ ಅವರು ಯುವರತ್ನ ತಂಡ ಸೇರಿದ್ದಾರೆ. ಹೌದು, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಇದೇ ಎಪ್ರಿಲ್ 1 ರಂದು ರಿಲೀಸ್ ಆಗಲಿದ್ದು ಇದೀಗ ಶ್ವೇತಾ ಪ್ರಸಾದ್ ಕೂಡಾ ಯುವರತ್ನದ ಭಾಗವಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಅಂದ ಹಾಗೇ ಶ್ವೇತಾ ಅವರು ಈ ಸಿನಿಮಾದಲ್ಲಿ ತೆರೆಯ ಮುಂದೆ ಕಾಣಿಸಿಕೊಳ್ಳುತ್ತಿಲ್ಲ. ಬದಲಿಗೆ ತೆರೆಯ ಹಿಂದೆ ಕಾಣಿಸಿಕೊಳ್ಳುತ್ತಿದ್ದಾರೆ. ಶ್ವೇತಾ ಅವರು ಕಂಠದಾನ ಕಲಾವಿದೆಯಾಗಿ ಯುವರತ್ನ ಸಿನಿಮಾ ಬಳಗ ಸೇರಿದ್ದಾರೆ. ಯುವರತ್ನ ಸಿನಿಮಾದಲ್ಲಿ ನಾಯಕಿಯಾಗಿ ಬಾಲಿವುಡ್ ನ ಚೆಂದುಳ್ಳಿ ಚೆಲುವೆ ಸಾಯೇಷಾ ನಟಿಸಿದ್ದು, ಅವರಿಗೆ ಕನ್ನಡ ಭಾಷೆ ಮಾತನಾಡಲು ಬರದ ಕಾರಣ ಅವರ ಪಾತ್ರಕ್ಕೆ ಡಬ್ಬಿಂಗ್ ನ ಅವಶ್ಯಕತೆ ಇತ್ತು. ಸಾಯೇಷಾ ಅವರಿಗೆ ದನಿ ನೀಡಲು ಸೂಕ್ತ ವ್ಯಕ್ತಿ ಯಾರು ಎಂದು ಹುಡುಕುತ್ತಿದ್ದಾಗ ಕಣ್ಣಿಗೆ ಕಂಡವರೇ ಶ್ವೇತಾ ಪ್ರಸಾದ್.
ಸಾಯೇಷಾ ಅವರಿಗೆ ಕಂಠದಾನ ಮಾಡಿರುವ ಶ್ವೇತಾ ಬಹಳ ಖುಷಿಯಾಗಿದ್ದಾರೆ. ಮಾತ್ರವಲ್ಲ ಈ ಸಂತಸದ ವಿಚಾರವನ್ನು ಹಂಚಿಕೊಂಡಿದ್ದಾರೆ. ” ಯುವರತ್ನ ಸಿನಿಮಾ ತಂಡದಿಂದ ನನಗೆ ಕರೆ ಬಂದಿತ್ತು. ನಾಯಕಿಯಾಗಿ ನಟಿಸಿರುವ ಸಾಯೇಷಾ ಪಾತ್ರಕ್ಕೆ ಸನಿ ನೀಡುತ್ತೀರಾ ಎಂದು ಕೇಳಿದಾಗ ನನಗೆ ಅನ್ನಿಸಿದ್ದು ನಾನ್ಯಾಕೆ ನೀಡಿಬಾರದು ಎಂದು. ಯಾಕೆಂದರೆ ಕಲಾವಿದೆ ಎಂದು ಆದ ಮೇಲೆ ಎಲ್ಲಾ ಕೆಲಸಗಳನ್ನು ಮಾಡಲು ತಯಾರಿರಬೇಕು. ಅದರಲ್ಲೂ ಇದು ಚಾಲೆಂಜಿಗ್ ಎಂದೆನಿಸಿದ ಕಾರಣ ಮಾಡಲೇಬೇಕು ಎಂದು ನಿರ್ಧಾರ ತೆಗೆದುಕೊಂಡೆ. ನಿಜವಾಗಿಯೂ ತುಂಬಾ ಖುಷಿಯಾಯಿತು. ಇಷ್ಟು ದಿನ ಕಿರುತೆರೆ ಜೊತೆಗೆ ಹಿರಿತೆರೆಯಲ್ಲಿ ನಾನು ನಟಿಸಿದ್ದೆ. ಆದರೆ ಇದೇ ಮೊದಲ ಬಾರಿಗೆ ಕಂಠದಾನ ಮಾಡುತ್ತಿದ್ದೇನೆ” ಎಂದು ಹೇಳಿದ್ದಾರೆ ಶ್ವೇತಾ ಪ್ರಸಾದ್.
“ಡಬ್ಬಿಂಗ್ ಅರ್ಥಾತ್ ಕಂಠದಾನ ಮಾಡುವುದು ಸುಲಭದ ಕೆಲಸವಲ್ಲ. ಅದು ನಿಜಕ್ಕೂ ತುಂಬಾ ಕಷ್ಟಕರವಾದುದು. ಕಂಠದಾನ ಮಾಡುವುದು ಅದೆಷ್ಟು ಕಷ್ಟ ಎಂಬ ವಿಚಾರ ನನಗೀಗ ತಿಳಿಯಿತು. ಹೌದು, ಕಂಠದಾನ ಅರ್ಥಾತ್ ಡಬ್ಬಿಂಗ್ ಮಾಡುವಾಗ ಎಲ್ಲ ದೃಶ್ಯಗಳನ್ನು ಮತ್ತೊಮ್ಮೆ ಅಭಿನಯಿಸಬೇಕಾಗುತ್ತದೆ. ಅದರಲ್ಲೂ ಭಾವನಾತ್ಮಕ ದೃಶ್ಯಗಳನ್ನಂತೂ ನಟಿಸದೇ ಇರಲು ಸಾಧ್ಯವಿಲ್ಲ. ಒಟ್ಟಿನಲ್ಲಿ ಇದು ಮೊದಲ ಅನುಭವವಾದರೂ ತುಂಬಾ ಖುಷಿಯಾಯಿತು” ಎನ್ನುವ ಶ್ವೇತಾ ಪ್ರಸಾದ್ ಮುಂದಿನ ದಿನಗಳಲ್ಲಿ ಕಂಠದಾನಕ್ಕೆ ಅವಕಾಶ ದೊರೆತರೆ ನೀಡಲು ತಯಾರಾಗಿದ್ದಾರೆ.
– ಅಹಲ್ಯಾ