ದರ್ಶನ್ ಕೇವಲ ನಟನಲ್ಲ. ಒಳ್ಳೆಯ ಹೃದಯವಂತಿಕೆಯಿರುವ ವ್ಯಕ್ತಿ. ಈ ಎಲ್ಲಾ ಗುಣಗಳಿಂದಲೇ ಡಿ ಬಾಸ್ ಬೇಗನೆ ಎಲ್ಲರಿಗೂ ಹತ್ತಿರವಾಗುವುದು. ಅಂದಹಾಗೆ ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ಹುಬ್ಬಳ್ಳಿಯಲ್ಲಿ ಅದ್ಧೂರಿಯಾಗಿ ನಡೆದಿದೆ. ಎಲ್ಲರ ಗಮನ ಹುಬ್ಬಳ್ಳಿ ಕಾರ್ಯಕ್ರಮದತ್ತ ನೆಟ್ಟಿತ್ತು. ಕಾರ್ಯಕ್ರಮದಲ್ಲಿ ತಮ್ಮ ಎಂದಿನಂತೆ ಅಭಿಮಾನಿಗಳ ಜೊತೆ ಮಾತನಾಡಿದ ದರ್ಶನ್, ಉತ್ತರ ಕರ್ನಾಟಕದ ಜನರ ಮೇಲೆ ಮಾತಲ್ಲೇ ಪ್ರೀತಿಯ ಮಳೆಗರದರು. ವೇದಿಕೆ ಮೇಲೆ ಚಪ್ಪಲಿ ಬಿಟ್ಟು ಮಾತು ಆರಂಭಿಸಿದ ದರ್ಶನ್, ‘ಇದು ನಾನು ಉತ್ತರ ಕರ್ನಾಟಕ ಜನರಿಗೆ ನೀಡುತ್ತಿರುವ ಗೌರವ. ಅವರೊಟ್ಟಿಗೆ ಮಾತನಾಡಬೇಕೆಂದರೆ ಚಪ್ಪಲಿ ಬಿಟ್ಟು, ಕೈ ಮುಗಿದು ಮಾತನಾಡಬೇಕು’ ಎಂದರು ದರ್ಶನ್. ಈ ಹಿಂದೆ ‘ಸಂಗೊಳ್ಳಿ ರಾಯಣ್ಣ’ ಸಿನಿಮಾದ ಪ್ರಚಾರ, ವಿಜಯ ಯಾತ್ರೆ ಸಂದರ್ಭದಲ್ಲಿ ಉತ್ತರ ಕರ್ನಾಟಕಕ್ಕೆ ಬಂದಿದ್ದ, ಜವಾರಿ ಮಂದಿ ತೋರಿದ್ದ ಪ್ರೀತಿ, ಗೌರವ ನೆನದು ಭಾವುಕರಾದರು ಡಿ ಬಾಸ್ ದರ್ಶನ್. ಉತ್ತರ ಕರ್ನಾಟಕದೊಂದಿಗೆ ತಮ್ಮ ತಂದೆಗೆ ಇದ್ದ ನಂಟಿನ ಬಗ್ಗೆಯೂ ನೆನಪಿಸಿಕೊಂಡರು.
ಈ ಸಂದರ್ಭದಲ್ಲಿ ಅಭಿಮಾನಿಗಳಿಗೆ ಕಿವಿ ಮಾತನ್ನೂ ಹೇಳಿದ ದರ್ಶನ್, ‘ನಾನು ಕಾರಿನಲ್ಲಿ ಹೋಗುವಾಗ ದಯವಿಟ್ಟು ಬೈಕ್ಗಳಲ್ಲಿ ಕಾರನ್ನು ಹಿಂಬಾಲಿಸಬೇಡಿ. ಮೊಬೈಲ್ ಹಿಡಿದುಕೊಂಡು ಕಾರನ್ನು ಹಿಂಬಾಲಿಸುತ್ತೀರಿ. ಯಾರಿಗಾದರೂ ಏನಾದರೂ ಹೆಚ್ಚು-ಕಡಿಮೆ ಆದರೆ ನಿಮ್ಮ ಕುಟುಂಬದವರು ಜೀವನ ಪರ್ಯಂತ ನನ್ನನ್ನು ದೂಷಿಸುತ್ತಾರೆ. ದಯವಿಟ್ಟು ಆ ಕೆಲಸ ಮಾಡಬೇಡಿ’ ಎಂದು ಮನವಿ ಮಾಡಿದರು ದರ್ಶನ್. ಇನ್ನು ‘ರಾಬರ್ಟ್’ ಸಿನಿಮಾವನ್ನು ಕಷ್ಟಪಟ್ಟು ಮಾಡಿದ್ದೇವೆ ಎಂದು ದರ್ಶನ್, ಈ ಸಿನಿಮಾಕ್ಕೂ ನಿಮ್ಮೆಲ್ಲರ ಆಶೀರ್ವಾದ, ಸಹಕಾರ ಅವಶ್ಯಕ ಎನ್ನುವ ಮೂಲಕ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದರು.
ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕೃಷಿ ಸಚಿವ ಬಿ.ಸಿ.ಪಾಟೀಲ್. ಸಚಿವ ಜಗದೀಶ್ ಶೆಟ್ಟರ್ ಸೇರಿದಂತೆ ಇನ್ನಿತರೆ ಸಿನಿಮಾರಂಗದ ಗಣ್ಯರಿಗೆ ಮನದಾಳದಿಂದ ಧನ್ಯವಾದ ಹೇಳಿದ ನಟ ದರ್ಶನ್, ವೇದಿಕೆ ಮುಂದಿದ್ದ ತನ್ನ ಆತ್ಮೀಯ ನಟ-ನಟಿಯರನ್ನು ತಮ್ಮದೇ ಸ್ಟೈಲ್ನಲ್ಲಿ ರಂಜಿಸಿದರು. ಅಭಿಮಾನಿಗಳಿಗೆ, ಉತ್ತರ ಕರ್ನಾಟಕದ ಜನರಿಗೆ ಪದೇ-ಪದೇ ಧನ್ಯವಾದ ಹೇಳಿದ ದರ್ಶನ್, ನನ್ನನ್ನು ಇಷ್ಟು ದಿನ ಸಹಿಸಿಕೊಂಡಿದ್ದೀರಿ. ನಿಮ್ಮ ಆಶೀರ್ವಾದ ಇದ್ದರೆ ಇನ್ನೂ ಕೆಲವು ವರ್ಷ ನಿಮ್ಮನ್ನು ರಂಜಿಸುತ್ತಿರುತ್ತೇನೆ ಹೇಳಿದರು ದರ್ಶನ್. ಈ ಸಿನಿಮಾದ ಕುರಿತು ಮಾತನಾಡುವ ಮೂಲಕ ‘ರಾಬರ್ಟ್’ ಸಿನಿಮಾದಲ್ಲಿ ಕೆಲಸ ಮಾಡಿದ ನಟ ದೇವರಾಜ್, ಜಗಪತಿ ಬಾಬು, ರವಿಶಂಕರ್, ನಟಿ ಆಶಾ ಭಟ್ , ನಿರ್ದೇಶಕ ತರುಣ್ ಸುಧೀರ್, ವಿನೋದ್ ಪ್ರಭಾಕರ್, ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಎಲ್ಲರಿಗೂ ಧನ್ಯವಾದ ಅರ್ಪಿಸಿದರು ದರ್ಶನ್.
ಒಟ್ಟಿನಲ್ಲಿ ರಾಬರ್ಟ್ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ಹುಬ್ಬಳ್ಳಿ ಜನರ ಗಮನ ಸೆಳೆದಂತೂ ಸುಳ್ಳಲ್ಲ. ಇನ್ನು ಈ ರಾಬರ್ಟ್ ಸಿನಿಮಾದ ಕುರಿತು ದರ್ಶನ್ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿದ್ದು, ಎಷ್ಟರ ಮಟ್ಟಿಗೆ ಅಭಿಮಾನಿಗಳನ್ನು ರಂಜಿಸುವಲ್ಲಿ ಸಿನಿಮಾ ಯಶಸ್ವಿಯಾಗಲಿದೆ ಎಂಬುದನ್ನು ಕಾದು ನೋಡಬೇಕು ಅಷ್ಟೇ.