ಬಿಗ್ ಬಾಸ್ ಕನ್ನಡ ಸೀಸನ್ 8 ರ ಆರಂಭಕ್ಕೆ ಕೆಲವು ದಿನಗಳು ಬಾಕಿಯಿದ್ದು,ಅಭಿಮಾನಿಗಳಲ್ಲಿ ಕುತೂಹಲ ದುಪ್ಪಟ್ಟಾಗಿದೆ. ಯಾರೆಲ್ಲ ದೊಡ್ಮನೆಗೆ ಪ್ರವೇಶ ಮಾಡಬಹುದು ಎಂಬ ಕುತೂಹಲ, ಚರ್ಚೆ ದೊಡ್ಡ ಮಟ್ಟದಲ್ಲಿದೆ. ಈಗಾಗಲೇ ದೊರೆತಿರುವ ಮಾಹಿತಿಯ ಪ್ರಕಾರ, ಈಗಾಗಲೇ ಎಲ್ಲ ಸ್ಪರ್ಧಿಗಳು ಹಾಗೂ ಶೋ ಸಿಬ್ಬಂದಿಗಳು ಬೆಂಗಳೂರಿನ ನಾನಾ ಪಂಚತಾರಾ ಹೋಟೆಲ್ಗಳಲ್ಲಿ ಕ್ವಾರಂಟೈನ್ ಆಗಿದ್ದಾರೆ. ಇವತ್ತು ಅವರುಗಳಿಗೆ ಎರಡನೇ ಬಾರಿ ಕೊರೊನಾ ಪರೀಕ್ಷೆ ನಡೆಯಲಿದೆ.ಕೊರೊನಾ ಪ್ರೋಟೋಕಾಲ್ ಪ್ರಕಾರ, ಬಿಗ್ ಬಾಸ್ ಮನೆ ಪ್ರವೇಶಕ್ಕೂ ಮುನ್ನ ಸ್ಪರ್ಧಿಗಳನ್ನು ಕ್ವಾರಂಟೈನ್ ಮಾಡುವುದು ಹಾಗೂ ಕೊರೊನಾ ಪರೀಕ್ಷೆಗೆ ಒಳಪಡಿಸುವುದು ಕಡ್ಡಾಯವಾಗಿದೆ. ಸ್ಪರ್ಧಿಗಳು ಯಾರು, ಯಾರೆಲ್ಲಾ ಈ ಬಾರಿಯ ಬಿಗ್ ಬಾಸ್ ನಲ್ಲಿ ಭಾಗವಹಿಸುತ್ತಾರೆ. ಯಾವ ಸ್ಥಳದಲ್ಲಿ ಕ್ವಾರಂಟೈನ್ ಆಗಿದ್ದಾರೆ ಎನ್ನುವುದು ಇಲ್ಲಿಯವರೆಗೆ ಗೌಪ್ಯವಾಗಿದೆ.
ಆದರೆ, ಕ್ವಾರಂಟೈನ್ನಲ್ಲಿ ಇರುವವರು ಈಗಲೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದಾರೆ. ಇದೇ ಕೆಲವರ ಇರುವಿಕೆ ಮತ್ತು ಬಿಗ್ ಬಾಸ್ ಮನೆಗೆ ಕಾಲಿಡುವ ಸಂಭಾವ್ಯತೆಗಳ ಕುರಿತಾದ ರಹಸ್ಯ ಹೊರಬೀಳಲು ಕಾರಣವಾಗಿದೆ.ವಾಹಿನಿ ಕಡೆಯಿಂದ ಸ್ಪರ್ಧಿಗಳಿಗೆ ನೀಡಲಾಗಿರುವ ‘ಬಿಗ್ ಬಾಸ್ ಕಿಟ್’ ಬಿಗ್ಬಾಸ್ ಮನೆಗೆ ಹೋಗಲಿರುವ ಸ್ಪರ್ಧಿಯೊಬ್ಬರ ಕುರಿತು ಮಾಹಿತಿ ನೀಡಿದ್ದು,ಟಿಕ್ ಟಾಕ್ ಧನುಶ್ರೀ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಮಾಹಿತಿ ಬಯಲಾಗಿದೆ. ಟಿಕ್ಟಾಕ್ ಮೂಲಕ ಲಕ್ಷಾಂತರ ಫಾಲೋವರ್ಸ್ ಹೊಂದಿರುವ ಧನುಶ್ರೀ ಈಗಾಗಲೇ ಕ್ವಾರಂಟೈನ್ಗೆ ಒಳಗಾಗಿದ್ದಾರೆ ಎನ್ನಲಾಗಿದೆ. ಕ್ವಾರಂಟೈನ್ ಸಮಯದಲ್ಲಿ ಧನುಶ್ರೀ ಹಂಚಿಕೊಂಡಿರುವ ವಿಡಿಯೋವೊಂದರಲ್ಲಿ ‘ಬಿಗ್ ಬಾಸ್ ಕಿಟ್’ ಕಣ್ಣಿಗೆ ಬಿದ್ದಿದೆ. ಅಲ್ಲಿಗೆ ಧನುಶ್ರೀ ಬಿಗ್ ಬಾಸ್ ಆಯೋಜಕರು ನೀಡಿರುವ ಹೋಟೆಲ್ ಕೋಣೆಯಲ್ಲಿ ಕ್ವಾರಂಟೈನ್ನಲ್ಲಿ ಇರುವುದು ಬಹುತೇಕ ಖಚಿತವಾಗಿರುವುದಂತೂ ನಿಜ.
ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಫೇಮಸ್ ಆಗಿರುವ ಧನುಶ್ರೀ ಟಿಕ್ ಟಾಕ್ ಫಾಲೋವರ್ಸ್ ಪಾಲಿಗೆ ಅಚ್ಚು ಮೆಚ್ಚು.ಧನುಶ್ರೀ ಅವರ ಪ್ರತಿಯೊಂದು ಟಿಕ್ ಟಾಕ್ ವಿಡಿಯೋ ಸಹ ಈಗಾಗಲೇ ಮಿಲಿಯನ್ ಗಟ್ಟಲೆ ವೀಕ್ಷಣೆ ಕಂಡಿದೆ. ಬಿಗ್ ಬಾಸ್ ಮನೆಗೆ ಗ್ಲಾಮರ್ ಹೆಚ್ಚಿಸುವ ಉದ್ದೇಶದಿಂದಲೇ ಕೆಲವರನ್ನು ಆಯ್ಕೆ ಮಾಡಿಕೊಂಡಿರುವ ಉದಾಹರಣೆಗಳಿವೆ. ಈ ಸಲ ಬಿಗ್ ಮನೆಗೆ ಧನುಶ್ರೀ ‘ಗ್ಲಾಮರ್ ಕ್ವೀನ್’ ಆದರೂ ಅದರಲ್ಲಿ ಅಚ್ಚರಿ ಪಡ ಬೇಕಾಗಿಲ್ಲ. ಇನ್ನು ಧನುಶ್ರೀ ಭಾರತೀಯ ಟಿಕ್ಟಾಕ್ ಸ್ಟಾರ್ ಜೊತೆಗೆ ನೃತ್ಯಗಾರ್ತಿ. ಸಣ್ಣ ಸಣ್ಣ ವಿಡಿಯೋ ತುಣುಕುಗಳು ಹಾಗೂ ಟಿಕ್ಟಾಕ್ ವಿಡಿಯೋ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಟಿಕ್ಟಾಕ್ನಲ್ಲಿ 1.2 ಮಿಲಿಯನ್ ಫಾಲೋವರ್ಸ್ ಹೊಂದಿದ್ದರು. ವಿಶೇಷ ಅಂದ್ರೆ ಟಿಕ್ಟಾಕ್ನಲ್ಲಿ 26.4 ಮಿಲಿಯನ್ ಲೈಕ್ಸ್ ಹೊಂದಿದ್ದರು. ಇನ್ನು ಮೊದಲಿನಿಂದಲೂ ಟಿಕ್ಟಾಕ್ ಸ್ಟಾರ್ಗಳು ಬಿಗ್ ಬಾಸ್ಗೆ ಅವಕಾಶ ಪಡೆದುಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಅಲ್ಲು ರಘು, ಬಿಂದು ಗೌಡ, ಸೋನು ಗೌಡ ಅಂತಹ ಟಿಕ್ಟಾಕ್ ಪ್ರತಿಭೆಗಳ ಹೆಸರು ಬಾರಿ ಚರ್ಚೆಯಲ್ಲಿತ್ತು. ಆದರೆ ಈಗ ಸರ್ಪ್ರೈಸ್ ಎಂಬಂತೆ ಧನುಶ್ರೀ ಪಾಲಿಗೆ ಅದೃಷ್ಟದ ಅರಸಿ ಬಂದಿದೆ. ಇನ್ನು ಭಾನುವಾರ ಸಂಜೆ 6 ಗಂಟೆಗೆ ಶೋ ಆರಂಭವಾಗಲಿದ್ದು, ಬಿಗ್ ಬಾಸ್ ಕಿಟ್ ಜೊತೆಗೆ ಧನುಶ್ರೀ ದೊಡ್ಮನೆಗೆ ಕಾಲಿಡಲಿದ್ದಾರೆ. ಒಟ್ಟಿನಲ್ಲಿ ಟಿಕ್ ಟಾಕ್ ವಿಡಿಯೋದ ಮೂಲಕ ಮನಗೆದ್ದ ಧನುಶ್ರೀಯನ್ನು ಬಿಗ್ ಬಾಸ್ ಮನೆಯಲ್ಲಿ ಕಾಣಲು ದುಪ್ಪಟ್ಟಾಗಿದೆ.