ಕನ್ನಡ ಚಿತ್ರರಂಗದಲ್ಲಿ ಕನ್ನಡತಿಯರಿಗಿಂತ ಪರಭಾಷಾ ಬೆಡಗಿಯರಿಗೆ ಮಣೆ ಜಾಸ್ತಿ. ಇತ್ತೀಚಿಗೆ ಬಂದ ಪರಭಾಷಾ ಬೆಡಗಿಯರಲ್ಲಿ ಥಟ್ಟನೇ ನೆನಪಾಗುವವರು ಶಾನ್ವಿ ಶ್ರೀವಾತ್ಸವ್. ಮನೋಜ್ಞ ನಟನೆಯ ಮೂಲಕ ಬಣ್ಣದ ಲೋಕದಲ್ಲಿ ಕಮಾಲ್ ಮಾಡುತ್ತಿರುವ ಈ ಮುದ್ದು ಮುಖದ ಬೆಡಗಿ ಈಗ ಸುದ್ದಿಯಲ್ಲಿದ್ದಾರೆ. ಕನ್ನಡದ ಜೊತೆಗೆ ತೆಲುಗು ಚಿತ್ರಗಳಲ್ಲಿ ನಟಿಸಿರುವ ಈ ಹುಡುಗಿ ಈಗ ಪಕ್ಕದ ಮಲೆಯಾಳಂ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಅಬ್ರಿದ್ ಶೈನ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ “ಮಹಾವೀರ್ಯಾರ್” ಚಿತ್ರದಲ್ಲಿ “ಪ್ರೇಮಂ” ಖ್ಯಾತಿಯ ನಿವಿನ್ ಪೌಲಿ ಹಾಗೂ ಆಸಿಫ್ ಅಲಿ ನಾಯಕರಾಗಿ ನಟಿಸಿದ್ದರೆ, ನಾಯಕಿಯಾಗಿ ಶಾನ್ವಿ ನಟಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಮಾಲಿವುಡ್ ಪ್ರವೇಶ ಮಾಡುತ್ತಿರುವ ಶಾನ್ವಿ ತುಂಬಾ ಉತ್ಸುಕರಾಗಿದ್ದಾರೆ.
ಮೂಲತಃ ಉತ್ತರ ಭಾರತದ ವಾರಾಣಾಸಿಯವರಾದ ಶಾನ್ವಿ ತೆಲುಗು ಸಿನಿಮಾ ಲವ್ಲಿಯ ಮೂಲಕ ನಟನಾ ಪಯಣ ಶುರು ಮಾಡಿದ ಶಾನ್ವಿ ಶ್ರೀವಾತ್ಸವ್ ಮುಂದೆ ಅಭಿನಯಿಸಿದ್ದು ತೆಲುಗಿನ ಅಡ್ಡ ಸಿನಿಮಾದಲ್ಲಿ. ತೆಲುಗು ಕಿರುತೆರೆಯಲ್ಲಿ ಮೋಡಿ ಮಾಡಿದ್ದ ಶಾನ್ವಿ ತದ ನಂತರ ಕನ್ನಡ ಸಿನಿರಂಗಕ್ಕೆ ಕಾಲಿಟ್ಟರು. ಚಿರಂಜೀವಿ ಸರ್ಜಾ ನಾಯಕನಾಗಿ ನಟಿಸಿರುವ ಚಂದ್ರಲೇಖಾ ಸಿನಿಮಾದಲ್ಲಿ ನಾಯಕಿ ಐಶು ಆಗಿ ನಟಿಸುವ ಮೂಲಕ ಚಂದನವನಕ್ಕೆ ಕಾಲಿಟ್ಟ ಈ ಸ್ನಿಗ್ಧ ಸುಂದರಿ ಮುಂದೆ ಕನ್ನಡದ ಹಲವು ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.
ಚಂದ್ರಲೇಖಾ ಸಿನಿಮಾದ ನಂತರ ಮಾಸ್ಟರ್ ಪೀಸ್ ಸಿನಿಮಾದಲ್ಲಿ ನಿಶಾ ಆಗಿ ಅಭಿನಯಿಸಿದ ಈಕೆ ರಾಕಿಂಗ್ ಸ್ಟಾರ್ ಯಶ್ ಜೊತೆಗೆ ನಟಿಸಿ ಸಿನಿಮಾ ಪ್ರಿಯರ ಮನ ಸೆಳೆದು ಬಿಟ್ಟರು. ಮನೋಜ್ಞ ನಟನೆಯ ಮೂಲಕ ಮನ ಸೆಳೆದ ಶಾನ್ವಿ ಸೈಮಾ ಫಿಲಂಫೇರ್ ಕೊಡಮಾಡುವ ಬೆಸ್ಟ್ ಆಕ್ಟರ್ಸ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಮುಂದೆ ಭಲೇ ಜೋಡಿ, ಸುಂದರಾಂಗ ಜಾಣ, ತಾರಕ್ , ಸಾಹೇಬ , ಮಫ್ತಿ, ಅವನೇ ಶ್ರೀಮನ್ನಾರಾಯಣ, ಗೀತಾ, ರವಿಚಂದ್ರ ಚಿತ್ರದಲ್ಲಿಯೂ ನಟಿಸಿರುವ ಶಾನ್ವಿ ಇತ್ತೀಚೆಗೆ ಕಸ್ತೂರಿ ಮಹಲ್ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಚಿರಂಜೀವಿ ಸರ್ಜಾ, ರಾಕಿಂಗ್ ಸ್ಟಾರ್ ಯಶ್, ಗೋಲ್ಡನ್ ಸ್ಟಾರ್ ಗಣೇಶ್, ಮನೋರಂಜನ್, ಶ್ರೀಮುರಳಿ, ಚಾಲೆಂಜಿಗ್ ಸ್ಟಾರ್ ದರ್ಶನ್ ಹೀಗೆ ಕನ್ನಡದ ಮೇರು ಕಲಾವಿದರುಗಳೊಂದಿಗೆ ತೆರೆ ಹಂಚಿಕೊಂಡಿದ್ದಾರೆ.
ದಿ ವಿಲನ್ ಚಿತ್ರದಲ್ಲಿ ಒಂದು ಹಾಡಿಗೆ ನೃತ್ಯ ಮಾಡಿರುವ ಶಾನ್ವಿ ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮಿರುದಂತೂ ನಿಜ. ಮನೋಜ್ಞ ಅಭಿನಯದ ಮೂಲಕ ಕನ್ನಡ, ತೆಲುಗು ಸಿನಿ ವೀಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸಿದ್ದ ಚೆಂದುಳ್ಳಿ ಚೆಲುವೆ ಇದೀಗ ಮಲಯಾಳಂ ಸಿನಿಮಾದಲ್ಲಿ ನಟಿಸುವ ಮೂಲಕ ಮಾಲಿವುಡ್ ನಲ್ಲೂ ಮೋಡಿ ಮಾಡಲಿದ್ದಾರೆ.
– ಅಹಲ್ಯಾ