ಅಂತಿಮ ದಿನಗಳಲ್ಲಿ ಚಿತ್ರರಂಗವಾಗಲೀ, ಸರ್ಕಾರವಾಗಲೀ ವಜ್ರಮುನಿ ನೆರವಿಗೆ ಬರದಿದ್ದದ್ದು ವಿಪರ್ಯಾಸ..!

in ಸಿನಿಮಾ 70 views

ಆ ಕಂಚಿನ ಕಂಠದ ನಟ ಒಮ್ಮೆ ತೆರೆ ಮೇಲೆ ಅಬ್ಬರಿಸಿದರೆ ಸಾಕು, ಅದು ನಟನೆ ಎಂಬುದನ್ನೇ ಮರೆತು ಜನರು ಆ ವ್ಯಕ್ತಿಗೆ ಬೈದುಕೊಳ್ಳುತ್ತಿದ್ದರು. ಸಿನಿಮಾ ಟೈಟಲ್ ಕಾರ್ಡಿನಲ್ಲಿ ವಜ್ರಮುನಿ ಹೆಸರು ನೋಡಿದೊಡನೆ ಸಾಕು ಸಿನಿಪ್ರಿಯರು ಆ ಚಿತ್ರವನ್ನು ಕದಲದೆ ನೋಡುತ್ತಿದ್ದರು. ವಜ್ರಮುನಿ ಅವರ ನಟನೆ, ಮುಖಭಾವ, ಅವರ ನಡುಗಿಸುವ ಧ್ವನಿ ಎಲ್ಲವೂ ಅವರು ವಿಲನ್​ ಪಾತ್ರಕ್ಕೆ ಹೇಳಿಮಾಡಿಸಿದಂತಿತ್ತು.ಇಷ್ಟು ಖ್ಯಾತಿ ಪಡೆದಿದ್ದ ನಟನ ಅಂತಿಮ ಕ್ಷಣಗಳು ಮಾತ್ರ ಬಹಳ ಶೋಚನೀಯವಾಗಿತ್ತು. ತೆರೆ ಮೇಲೆ ಎಷ್ಟು ಭೀಬತ್ಸರಾಗಿದ್ದರೋ ನಟಭಯಂಕರ ವಜ್ರಮುನಿ ತೆರೆ ಹಿಂದೆ ಅಷ್ಟೇ ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದರು. ಬಹಳಷ್ಟು ಸಿನಿಮಾಗಳಲ್ಲಿ ನಟಿಸಿದ ವಜ್ರಮುನಿ ಬರಬರುತ್ತಾ ಆರೋಗ್ಯ ಸಮಸ್ಯೆಯಿಂದ ನಲುಗಿದರು. ‘ದಾಯಾದಿ’ ಸಿನಿಮಾ ಚಿತ್ರೀಕರಣದ ವೇಳೆ ಅವರಿಗೆ ಒಂದೊಂದೇ ಆರೋಗ್ಯ ಸಮಸ್ಯೆಗಳು ಎದುರಾಗತೊಡಗಿದವು. ಮಧುಮೇಹ, ರಕ್ತದ ಒತ್ತಡ, ಹೃದಯ ಸಂಬಂಧಿ ಕಾಯಿಲೆ, ಕಿಡ್ನಿ ವೈಫಲ್ಯ ಹೀಗೆ ಎಲ್ಲಾ ಒಂದೇ ಬಾರಿ ಕಾಡತೊಡಗಿದವು.

Advertisement

 

Advertisement

Advertisement

ಅಜಾನುಬಾಹುವಾಗಿದ್ದ ವಜ್ರಮುನಿ ಈ ಕಾಯಿಲೆಗಳಿಂದ ಕೃಶವಾಗತೊಡಗಿದರು. ಒಪ್ಪಿಕೊಂಡ ಚಿತ್ರಗಳ ಚಿತ್ರೀಕರಣಕ್ಕೆ ಹೋಗಲಾಗದೆ ಹಾಸಿಗೆ ಹಿಡಿದರು. ಕಿಡ್ನಿ ಶಸ್ತ್ರಚಿಕಿತ್ಸೆ ನಂತರವೂ ಸಮಸ್ಯೆ ಬಗೆಹರಿಯಲಿಲ್ಲ. ಧೀರ್ಘಕಾಲ ಆಸ್ಪತ್ರೆಯಿಂದ ಮನೆಗೆ, ಮನೆಯಿಂದ ಆಸ್ಪತ್ರೆಗೆ ಅಲೆದಾಡತೊಡಗಿದರು. ಆಸ್ಪತ್ರೆ ಖರ್ಚಿಗೆ ಅವರು ಬಹಳ ಕಷ್ಟಪಟ್ಟರು. ಆದರೆ ಚಿತ್ರರಂಗವಾಗಲೀ, ಸರ್ಕಾರವಾಗಲೀ ಅವರ ಸಹಾಯಕ್ಕೆ ಬರಲಿಲ್ಲ. ವಜ್ರಮುನಿ ಎಂದೊಡನೆ ನೆನಪಾಗುತ್ತಿದ್ದದ್ದು ಅವರ ಧ್ವನಿ. ಆದರೆ ಕೊನೆ ದಿನಗಳಲ್ಲಿ ಅವರ ಕಂಠಕ್ಕೆ ಮೊದಲಿದ್ದ ಚೈತನ್ಯ ಇರಲಿಲ್ಲ. ಮಾಡಿದ ಚಿಕಿತ್ಸೆಗಳು ಯಶಸ್ವಿಯಾಗದೆ ನಟ ಭಯಂಕರ 2006 ಜನವರಿ 5 ಇಹಲೋಕ ತ್ಯಜಿಸಿದರು.

Advertisement

ಸದಾನಂದ್ ಸಾಗರ್ ಆಗಿ ಹುಟ್ಟಿ ಕುಲದೈವ ವಜ್ರಮುನೇಶ್ವರಿ ಹೆಸರನ್ನು ಪಡೆದು ಅಭಿಮಾನಿಗಳನ್ನು ರಂಜಿಸಿದ ವಜ್ರಮುನಿ ಇಂದಿಗೂ ಅಭಿಮಾನಿಗಳ ಮನಸ್ಸಿನಲ್ಲಿ ಇದ್ದಾರೆ. ‘ಮಲ್ಲಮ್ಮನ ಪವಾಡ’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ವಜ್ರಮುನಿ ತಮ್ಮ ನಟನೆಯಿಂದ ಕನ್ನಡ ಚಿತ್ರರಂಗದಲ್ಲಿ ನಿಜಕ್ಕೂ ಪವಾಡ ಮಾಡಿದ್ದರು. ಇಂತ ಅದ್ಭುತ ನಟ ಇಂದು ನಮ್ಮೊಂದಿಗೆ ಇಲ್ಲದಿರುವುದು ನಿಜಕ್ಕೂ ಬೇಸರದ ಸಂಗತಿ.

Advertisement
Share this on...