ದೇವಿಯಾಗಿ ಕಿರುತೆರೆಯಲ್ಲಿ ಮೋಡಿ ಮಾಡಿದ ಪ್ರಥಮಾ ಪ್ರಸಾದ್ ಗೆ ಪ್ರೇರಣೆ ಯಾರು ಗೊತ್ತಾ?

in ಮನರಂಜನೆ 429 views

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಮ್ನೋರು ಧಾರಾವಾಹಿಯಲ್ಲಿ ದೇವಿಯಾಗಿ ಅಭಿನಯಿಸಿದ್ದ ಪ್ರಥಮಾ ಪ್ರಸಾದ್ ಕಿರುತೆರೆಗೆ ಹೊಸಬರೇನಲ್ಲ! ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ದೇವಿ, ಮಹಾದೇವಿ ಧಾರಾವಾಹಿಯಲ್ಲಿಯೂ ದೇವಿಯಾಗಿ ನಟಿಸಿರುವ ಪ್ರಥಮಾ ಪ್ರಸಾದ್ ಪುಟ್ಟತ್ತೆಯಾಗಿಯೂ ಕಿರುತೆರೆಯಲ್ಲಿ ಫೇಮಸ್ಸು. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬ್ರಹ್ಮಗಂಟು ಧಾರಾವಾಹಿಯಲ್ಲಿ ನಾಯಕ ಲಕ್ಕಿಯ ಸೋದರತ್ತೆ ಪುಟ್ಟತ್ತೆ ಆಗಿ ನಟಿಸಿ ಕಿರುತೆರೆ ಪ್ರಿಯರ ಮನ ಸೆಳೆದಿರುವ ಪ್ರಥಮಾ ಪ್ರಸಾದ್ ದೇವಿ ಪಾತ್ರವೂ ಕೂಡಾ ಸಾಕಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿದೆ. ಅಂದ ಹಾಗೇ ಪ್ರಥಮಾ ಪ್ರಸಾದ್ ಅವರು ದೇವಿಯಾಗಿ ಕಿರುತೆರೆಯಲ್ಲಿ ನಟಿಸಿದ್ದಾರೆ, ವೀಕ್ಷಕರ ಮನ ಸೆಳೆದಿದ್ದಾರೆ ಎಂದರೆ ಅದಕ್ಕೆ ಸ್ಫೂರ್ತಿ ಬೇರಾರೂ ಅಲ್ಲ, ರಮ್ಯಾ ಕೃಷ್ಣನ್. ಈ ಮುಖ್ಯವಾದ ವಿಚಾರವನ್ನು ಸ್ವತಃ ಪ್ರಥಮಾ ಪ್ರಸಾದ್ ಅವರೇ ಹಂಚಿಕೊಂಡಿದ್ದಾರೆ. “ನಾನಿಂದು ದೇವಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ ಎಂದರೆ ಅದಕ್ಕೆ ಒಂದರ್ಥದಲ್ಲಿ ರಮ್ಯಾಕೃಷ್ಣನ್ ಅವರೇ ಪ್ರೇರಣೆ ಎಂದರೆ ತಪ್ಪಾಗಲಾರದು.

Advertisement

Advertisement

ಯಾಕೆಂದರೆ ನಾನು ರಮ್ಯಾಕೃಷ್ಣನ್ ಅವರ ದೇವಿ ಪಾತ್ರಗಳನ್ನು ನೋಡುತ್ತಲೇ ಬೆಳೆದವಳು. ಅವರ ಅಭಿನಯ ಕಂಡು, ಅದರಿಂದ ಪ್ರೇರಣೆ ಪಡೆದು ನಾನು ಇಂದು ದೇವಿ ಪಾತ್ರಕ್ಕೆ ಜೀವ ತುಂಬುತ್ತಿದ್ದೇನೆ. ಬಣ್ಣದ ಬದುಕಿನಲ್ಲಿ ನಾನು ದೇವಿಯಾಗಿ ಕಾಣಿಸಿಕೊಳ್ಳುತ್ತಿರುವುದಕ್ಕೆ ನಿಜವಾಗಿಯೂ ಪುಣ್ಯ ಮಾಡಿದ್ದೇನೆ. ಇದು ದೇವಿಯ ಆಶೀರ್ವಾದವೂ ಹೌದು” ಎಂದು ಹೇಳಿದ್ದಾರೆ ಪ್ರಥಮಾ ಪ್ರಸಾದ್.

Advertisement

ಇದರ ಜೊತೆಗೆ ಚಿತ್ರೀಕರಣದ ಸಮಯದಲ್ಲಿ ಆಗಿರುವಂತಹ ಅನುಭವಗಳನ್ನು ಹೇಳಿಕೊಂಡಿದ್ದಾರೆ ಪ್ರಥಮಾ ಪ್ರಸಾದ್. ” ಚಿತ್ರೀಕರಣ ನಡೆಯುತ್ತಿರುವಾಗ ನಾನು ದೇವಿಯ ಅವತಾರದಲ್ಲಿಯೇ ಸೆಟ್ ನಲ್ಲಿ ಇರುತ್ತೇನೆ. ಆಗ ಹಲವರು ಆಶೀರ್ವಾದ ಪಡೆಯಲು ಬರುತ್ತಾರೆ. ಅವರು ಆ ಸಮಯದಲ್ಲಿ ನನ್ನನ್ನು ಪ್ರಥಮಾ ಪ್ರಸಾದ್ ಆಗಿ ಗುರುತಿಸುವುದಿಲ್ಲ. ಬದಲಿಗೆ ದೇವಿಯಾಗಿಯೇ ನೋಡುತ್ತಾರೆ. ಮಾತ್ರವಲ್ಲ ಆ ಪಾತ್ರಕ್ಕೆ ಗೌರವವನ್ನು ಕೂಡಾ ನೀಡುತ್ತಾರೆ. ಇದಕ್ಕಿಂತ ದೊಡ್ಡದಾದ ಪ್ರೋತ್ಸಾಹ ಒರ್ವ ಕಲಾವಿದೆಗೆ ಇನ್ನೇನು ಬೇಕು” ಎಂದು ಹೇಳುತ್ತಾರೆ ಪ್ರಥಮಾ ಪ್ರಸಾದ್.

Advertisement

ಇನ್ನು ಬಹು ಮುಖ್ಯವಾದ ವಿಚಾರವೆಂದರೆ ಯಾವುದೇ ಪಾತ್ರವಾಗಿರಲಿ, ಅದಕ್ಕೆ ತಯಾರಿ ಮಾಡಬೇಕಾದುದು ಅತೀ ಅವಶ್ಯಕ. ಪ್ರಥಮಾ ಪ್ರಸಾದ್ ಕೂಡಾ ಇದಕ್ಕೆ ಹೊರತಾಗಿಲ್ಲ. ದೇವಿ ಪಾತ್ರಕ್ಕೆ ಜೀವ ತುಂಬುವ ಮೊದಲು ಅವರು ಸಾಕಷ್ಟು ತಯಾರಿಗಳನ್ನು ಮಾಡುತ್ತಾರೆ. “ದೇವಿಯಾಗಿ ತೆರೆಯ ಮೇಲೆ ಕಾಣಿಸಿಕೊಳ್ಳುವ ಮೊದಲು ನಾನು ದೇವಿ ಸ್ತೋತ್ರ ವನ್ನು ಪಠಿಸುವುದನ್ನು ಮರೆಯುವುದೇ ಇಲ್ಲ. ಇದರ ಜೊತೆಗೆ ಧ್ಯಾನವನ್ನು ಕೂಡಾ ಮಾಡುತ್ತೇನೆ. ಇನ್ನು ನಿಜ ಜೀವನದಲ್ಲಿಯೂ ನನಗೂ, ಆಧ್ಯಾತ್ಮ ಕ್ಕೂ ಒಂದು ರೀತಿಯ ನಂಟಿದೆ. ಅದೇ ಕಾರಣದಿಂದ ಧಾರಾವಾಹಿಯ ಪಾತ್ರವಾಗುವ ಮೊದಲು ದೇವಿಯ ಆಶೀರ್ವಾದ ಪಡೆಯುವುದನ್ನು ತಪ್ಪಿಸುವುದೇ ಇಲ್ಲ” ಎನ್ನುತ್ತಾರೆ ಪ್ರಥಮಾ ಪ್ರಸಾದ್.

ಬೊಂಬೆಯಾಟವಯ್ಯಾ ಧಾರಾವಾಹಿಯ ಮೂಲಕ ಕಿರುತೆರೆ ಪ್ರವೇಶಿಸಿದ ಪ್ರಥಮಾ ಪ್ರಸಾದ್ ಮುಂದೆ ದೇವಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು‌. ಮುಂದೆ ಬ್ರಹ್ಮಗಂಟು ವಿನ ಪುಟ್ಟತ್ತೆಯಾಗಿಯೂ ಮೋಡಿ ಮಾಡಿದ್ದ ಪ್ರಥಮಾ ಪ್ರಸಾದ್ ನಟಿ ಮಾತ್ರವಲ್ಲದೇ ಅದ್ಭುತ ನೃತ್ಯಗಾರ್ತಿಯೂ ಹೌದು! ಕಥಕ್ ಕಲಾವಿದೆಯಾಗಿರುವ ಪ್ರಥಮಾ ಪ್ರಸಾದ್ ಮಾಯಾ ರಾವ್ ಅವರ ಬಳಿಯಿಂದ ಶಾಸ್ತ್ರೋಕ್ತವಾಗಿ ಕಥಕ್ ಕಲಿತಿದ್ದಾರೆ. ಇದರ ಜೊತೆಗೆ ಚೌಕಾಬಾರ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಬೆಳ್ಳಿತೆರೆಗೂ ಪಾಂಚಾಲ ಮಾಡಿರುವ ಪ್ರಥಮಾ ಪ್ರಸಾದ್ ಕೇವಲ ಕಿರುತೆರೆ ಮಾತ್ರವಲ್ಲದೇ ಬೆಳ್ಳಿತೆರೆಯಲ್ಲಿಯೂ ನಟನಾ ಕಂಪನ್ನು ಪಸರಿಸಿದ್ದಾರೆ.
– ಅಹಲ್ಯಾ

Advertisement
Share this on...