ಮಾನವ ಪರಿಸರದ ಕೂಸು !

in ಕನ್ನಡ ಮಾಹಿತಿ 407 views

ಆಧುನಿಕ ಪ್ರಪಂಚದಲ್ಲಿ ದಿನದಿಂದ ದಿನಕ್ಕೆ ಮನುಷ್ಯನ ಬೇಡಿಕೆಗಳು ಅಪಾರ ಆಗುತ್ತಲೇ ಸಾಗುತ್ತಿವೆ, ವೈಜ್ಞಾನಿಕ ತಾಂತ್ರಿಕ ಬಹು ರೀತಿಯಲ್ಲಿ ಪ್ರಗತಿ ಹೊಂದುತ್ತಿರುವ ಮಾನವ ಇಂದು ತನ್ನ ಜೀವನ ಶೈಲಿಯಲ್ಲಿ ಬಹಳಷ್ಟು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಪರಿಸರದ ಮೇಲೆ ಹೆಚ್ಚಿನ ಒತ್ತಡವನ್ನು ಹಾಕುತ್ತಲೇ ಸಾಗುತ್ತಿದ್ದಾನೆ, ಇಂದು ನಮ್ಮ ಸುತ್ತಮುತ್ತಲೂ ಇರುವ ವಾತಾವರಣ ಬಹಳಷ್ಟು ಕಲುಷಿತಗೊಂಡಿದೆ ಇದೆಲ್ಲದಕ್ಕೂ ಕಾರಣ ಮನುಷ್ಯನ ಐಷಾರಾಮಿ ಬದುಕು,ಮಿತಿಯಿರದ ಆಸೆ ಆಮಿಷಗಳು.ಇಂದು ನಮ್ಮ ನೆಲ ಜಲ ವಾಯು ಬಹಳಷ್ಟು ರೀತಿಯಲ್ಲಿ ಕಲುಷಿತ ಗೊಳ್ಳುತ್ತಾ ಸಾಗುತ್ತಿದೆ.ಯಾವುದೇ ಒಂದು ರಾಷ್ಟ್ರ ಅಭಿವೃದ್ಧಿ ಹೊಂದಬೇಕಾದರೆ ಎರಡು ರೀತಿಯ ಸಂಪನ್ಮೂಲಗಳು ಅವಶ್ಯ ಒಂದು ನೈಸರ್ಗಿಕ ಸಂಪನ್ಮೂಲ, ಇನ್ನೊಂದು ಮಾನವ ಸಂಪನ್ಮೂಲ.ಈ ಎರಡು ರೀತಿಯ ಸಂಪನ್ಮೂಲಗಳು ಸಮತೋಲನದಲ್ಲಿ ಇದ್ದಾಗ ಮಾತ್ರ ಆ ದೇಶ ಸಂಪದ್ಭರಿತ ಆರೋಗ್ಯಕರವಾದ ರಾಷ್ಟ್ರವಾಗಲು ಸಾಧ್ಯ.ನಿಸರ್ಗ ದಲ್ಲಾಗಲಿ ಅಥವಾ ಮಾನವ ಸಂಪನ್ಮೂಲದಲ್ಲಾಗಲಿ ಏನಾದರೂ ಏರುಪೇರುಗಳು ಉಂಟಾದರೆ ಆ ಅಭಿವೃದ್ಧಿಯ ಜೊತೆಗೆ ಇಡೀ ಮಾನವ ಸಂಕುಲ ಪ್ರಾಣಿ ಸಂಕುಲದ ಮೇಲೆ ವಿಪರೀತ ಪರಿಣಾಮ ಉಂಟಾಗುತ್ತದೆ.” ಇಡೀ ವಿಶ್ವವೇ ಒಂದು ಕುಟುಂಬ” ಇದರಲ್ಲಿರುವ ಜೈವಿಕ ಹಾಗೂ ಅಜೈವಿಕ ಘಟಕಗಳ ಪರಸ್ಪರ ಅವಲಂಬನೆಯೇ ಜೊತೆಗೆ ಪರಿಸರದ ಕಾರ್ಯ ಚಟುವಟಿಕೆಗಳು ನಿರಂತರ ಸಾಗುತ್ತಲೇ ಇರುತ್ತವೆ. ಇಡೀ ಪರಿಸರದಲ್ಲಿ ಪ್ರಾಣಿ ಸಂಕುಲ ಸಸ್ಯ ಸಂಕುಲ ಮಾನವ ಸಂಕುಲ ಹಾಗೂ ಅಜೈವಿಕ ಘಟಕಗಳು ಎಲ್ಲವೂ ಒಟ್ಟಾಗಿ ಪರಿಸರದ ಅಂಶಗಳು. ಮನುಷ್ಯನ ಉಳಿವಿಗೆ ಕಾರಣವಾಗಿರುವ ಉಸಿರಾಡುವ ವಾಯು, ಕುಡಿಯುವ ಜಲಧಾರೆ, ವಾಸಿಸುವ ನೆಲ ಹೀಗೆ ಇಡೀ ಪ್ರಕೃತಿಯ ಮಧ್ಯೆ ಮಾನವ ಜೀವನವನ್ನು ಸಾಗಿಸುತ್ತಾ ಬಂದಿದ್ದಾನೆ. ದಿನದಿಂದ ದಿನಕ್ಕೆ ಮಾನವನು ಆಕಾಶದ ಎತ್ತರಕ್ಕೆ ಹಾರುವಷ್ಟು ಸಾಧನೆ ಮಾಡುತ್ತಾ ಸಾಗಿದ, ಭೂಮಿಯ ಆಳಕ್ಕೂ ಅವನ ಸಂಶೋಧನೆಗಳು ಸಾಗಿದವು ಆದರೆ ಇಂದು ಪರಿಸರದ ಮೇಲೆ ಒತ್ತಡ ಹೆಚ್ಚುತ್ತ ಸಾಗಿದೆ.

Advertisement

 

Advertisement

Advertisement

ಇದರಿಂದ ಪರಿಸರ ಬಹಳಷ್ಟು ರೀತಿಯಲ್ಲಿ ಮಾಲಿನ್ಯವಾಗಿದೆ. ಮಾನವ ಏನೇ ಮಾಡಿದರೂ ಸಹ ಪರಿಸರದ ಮುಂದೆ ಕೂಸು ಏಕೆಂದರೆ ಒಂದು ಕ್ಷಣ ವಾಯು ಇರದೆ ಬದುಕಲಾರ. ಅವನ ಸಂಪೂರ್ಣ ಅಸ್ತಿತ್ವವೇ ಪರಿಸರದ ಮಧ್ಯದಲ್ಲೇ ಸಾಗುವಂಥದ್ದು ,ಪರಿಸರ ನಾಶವಾದರೆ ಮಾನವನಿಗೆ ಉಳಿಗಾಲವಿಲ್ಲ. ಪರಿಸರ ಸಂರಕ್ಷಣೆ ಪ್ರತಿಯೊಬ್ಬ ಪ್ರಜೆಯ ಹೊಣೆಗಾರಿಕೆ. ಹೆಚ್ಚುತ್ತಿರುವ ಜನಸಂಖ್ಯೆ, ಇದರಿಂದಾಗುವ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಒತ್ತಡ ಹಾಗೂ ಮಾನವನ ಅತಿರೇಕದ ಐಷಾರಾಮಿ ಬದುಕಿನಿಂದಾಗಿ ಪರಿಸರ ನಾಶವಾಗುತ್ತಿರುವ ದುರಂತದ ಸಂಗತಿ ಇವೆಲ್ಲವೂ ಇಡೀ ವಿಶ್ವಕ್ಕೆ ಅಪಾಯದ ಮುನ್ಸೂಚನೆಗಳನ್ನು ನೀಡುತ್ತಿವೆ. “ಪರಿಸರ ಉಳಿದರೆ ಮಾತ್ರ ನಾವು ಉಳಿಯಲು ಸಾಧ್ಯ” ಎಂಬುವ ಸತ್ಯವನ್ನು ಅರ್ಥೈಸಿಕೊಂಡಾಗ ಪರಿಸರ ಕಾಳಜಿ ನಮ್ಮೆಲ್ಲರ ಜವಾಬ್ದಾರಿಯಾಗಿದೆ . ಪ್ರತಿ ವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನ ಎಂದು ಆಚರಿಸಲಾಗುತ್ತಿದೆ, ಜಗತ್ತಿನ ಪ್ರತಿಯೊಬ್ಬ ನಾಗರಿಕನಿಗೆ ಪರಿಸರದ ಕುರಿತು ಅರಿವು ಮೂಡಿಸುವುದು ಜಾಗೃತಿ ಮೂಡಿಸುವುದು ಹಾಗೂ ಪರಿಸರ ಸಂರಕ್ಷಣೆಯ ಹೊಣೆಗಾರಿಕೆಯನ್ನು ಬೆಳೆಸಿಕೊಳ್ಳುವುದು ಹೀಗೆ ಹತ್ತು ಹಲವಾರು ಉದ್ದೇಶಗಳನ್ನು ಇಟ್ಟುಕೊಂಡು ಪರಿಸರ ದಿನವನ್ನು ಆಚರಿಸಲಾಗುತ್ತಿದೆ. 1972 ರ ಜೂನ್ 5 ರಂದು ಸ್ವೀಡನ್ ದೇಶದ ರಾಜಧಾನಿ ಸ್ಟಾಕ್ ಹೋಮ್ ನಲ್ಲಿ ಜರುಗಿದ “ವಿಶ್ವ ಸಂಸ್ಥೆಯ ಮಾನವ ಪರಿಸರ ಸಮ್ಮೇಳನ”ದಲ್ಲಿ ಅಂದು ಪರಿಸರ ಸಂರಕ್ಷಣಾ ಕಾರ್ಯಕ್ರಮದ ಅಂಗವಾಗಿ “ವಿಶ್ವ ಪರಿಸರ ದಿನ”ವನ್ನು ಎಲ್ಲ ದೇಶಗಳು ಆಚರಿಸಬೇಕೆಂಬ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು, ಹಾಗೆಯೇ ವಿಶ್ವದ ಎಲ್ಲ ರಾಷ್ಟ್ರಗಳು ಪರಿಸರ ಸಂರಕ್ಷಣೆಗಾಗಿ ಕಾರ್ಯ ಯೋಜನೆಗಳನ್ನು ರೂಪಿಸಿಕೊಂಡು ತಮ್ಮ ತಮ್ಮ ರಾಷ್ಟ್ರಗಳಲ್ಲಿ ಅನುಷ್ಠಾನಗೊಳಿಸಿ ಪರಿಸರ ಜಾಗೃತಿಯನ್ನು ಮೂಡಿಸಬೇಕೆಂದು ತೀರ್ಮಾನಿಸಲಾಯಿತು. ಹಾಗೆಯೇ ವಿಶ್ವದ ಎಲ್ಲಾ ರಾಷ್ಟ್ರಗಳು ವಿಶ್ವಸಂಸ್ಥೆಯ ಪರಿಸರ ಸಂರಕ್ಷಣಾ ಕಾರ್ಯಕ್ರಮದ ಅಡಿಯಲ್ಲಿ ಪರಿಸರ ಸಮಾವೇಶಗಳನ್ನು ನಡೆಸುತ್ತಾ ನಾಗರಿಕರಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿವೆ. ಈ ಕಾರ್ಯಕ್ರಮಗಳ ಉದ್ದೇಶ ಹೆಚ್ಚುತ್ತಿರುವ ವಾಯುಮಾಲಿನ್ಯ ಜಲಮಾಲಿನ್ಯ ಶಬ್ದಮಾಲಿನ್ಯ ಮಣ್ಣು ಮಾಲಿನ್ಯ ಹೀಗೆ ಇವೆಲ್ಲವುಗಳನ್ನು ತಪ್ಪಿಸುವುದು ಹಾಗೂ ವಾಯುಮಂಡಲದಲ್ಲಿ ಓಜೋನ್ ಪದರ ಶಿಥಿಲ,ಹೆಚ್ಚುತ್ತಿರುವ ಭೂತಾಪ ,ಇದರಿಂದ ಇಡೀ ಭೂಮಂಡಲದ ಮೇಲಾಗುತ್ತಿರುವ ಪರಿಣಾಮ ಇವೆಲ್ಲವುಗಳ ಸಂರಕ್ಷ ಣೆಗಾಗಿ ಕ್ರಮ ವಹಿಸುವುದು.ಪರಿಸರ ಸ್ನೇಹಿ ಇಂಧನಗಳನ್ನು ಬಳಸುವುದು ವಿಕಿರಣದ ಪರಿಣಾಮ ಕುರಿತಂತೆ ಜಾಗೃತಿ ಮೂಡಿಸುವುದು ಸಾರ್ವಜನಿಕರಲ್ಲಿ ಪರಿಸರದ ಕಾಳಜಿಯನ್ನು ಮೂಡಿಸುವುದು ಹೀಗೆ ಹತ್ತು ಹಲವಾರು ಕಾರ್ಯಯೋಜನೆಗಳನ್ನು ಈ ಸಮಾವೇಶಗಳು ಹಾಕಿಕೊಂಡಿರುತ್ತವೆ.

Advertisement

 

ನಮ್ಮ ಸುತ್ತಮುತ್ತಲು ಇರುವ ಗಿಡ ಮರ ಬಳ್ಳಿ ಪ್ರಾಣಿ ಪಕ್ಷಿ ಸಸ್ಯ ಸಂಕುಲ ಮಾನವ ಸಂಕುಲ ಸಾಗರ ಸಮುದ್ರ ಪರ್ವತ ಕಂದರಗಳ ಹೀಗೆ ಇವೆಲ್ಲವನ್ನೂ ಒಟ್ಟಾಗಿ ಪರಿಸರ ಎಂದು ಗುರುತಿಸುತ್ತೇವೆ .ಅಭಿವೃದ್ಧಿಯ ಹೆಸರಿನಲ್ಲಿ ಪರಿಸರ ನಾಶವಾಗುತ್ತಿದೆ ಏರುತ್ತಿರುವ ಜನಸಂಖ್ಯೆಯಿಂದಾಗಿ ಪರಿಸರದ ಮೇಲಾಗುತ್ತಿರುವ ದುಷ್ಪರಿಣಾಮಗಳನ್ನು ಉಳಿಸಲು ಸಾಧ್ಯವಿಲ್ಲ,ಇರುವ ನೆಲ ಜಲ ಸಾಕಾಗದಂತಾಗಿ ಮನುಷ್ಯ ಪರ್ಯಾಯ ಮಾರ್ಗಗಳನ್ನು ಹುಡುಕುತ್ತಾ ಸಾಗಿದ್ದಾನೆ ಇದರಿಂದಾಗಿ ಅಸಂಖ್ಯಾತ ಹಾನಿ ಪರಿಸರಕ್ಕೆ ಉಂಟಾಗುತ್ತಿದೆ. ಆಧುನಿಕ ಐಷಾರಾಮಿ ಯಂತ್ರ ತಂತ್ರದ ಜಗತ್ತಿನಲ್ಲಿ ಬದುಕುತ್ತಿರುವ ಮಾನವ ಕೇವಲ ತನ್ನ ಸುಖಭೋಗಕ್ಕಾಗಿ ಸಂಪೂರ್ಣ ಪರಿಸರವನ್ನು ಹೀಗೆ ನಾಶ ಮಾಡುತ್ತಾ ಸಾಗಿದರೆ ಮುಂದೊಂದು ದಿನ ಅದೆಷ್ಟೋ ಸಂಪನ್ಮೂಲಗಳು ಬರಿದಾಗಿ ಮುಂದಿನ ಪೀಳಿಗೆ ಪರಿಸರದಲ್ಲಿ ಬಹಳಷ್ಟು ಅಸಮತೋಲನಗಳನ್ನು ಕಾಣುತ್ತದೆ. ನಾವು ವಾಸಿಸುತ್ತಿರುವ ಈ ಭೂಮಿಯನ್ನು ಸಂರಕ್ಷಿಸಬೇಕು ಪರಿಸರದ ಕಾಳಜಿಯ ಬಗೆಗೆ ವಿಚಾರ ಮಂಥನ ಪ್ರತಿಯೊಬ್ಬರ ಮನಸ್ಸಿನಲ್ಲಿ ಮೂಡಬೇಕು.

ಮನೆಗೆ ಮಕ್ಕಳಿರಬೇಕು ಎಂಬ ಆಶಯ ಹೇಗೆಯೋ ಹಾಗೆ “ಮನೆಗೊಂದು ಗಿಡ ಊರಿಗೊಂದು ವನ” ಎಂಬ ಸಂಕಲ್ಪ ನಮ್ಮದಾಗಬೇಕು. ಇಂದು ಅದೆಷ್ಟೋ ಜೀವ ಸಂಕುಲಗಳು ನಾಶ ಹೊಂದುತ್ತಾ ಸಾಗಿವೆ ಇದಕ್ಕೆ ಕಾರಣ ಪರಿಸರ ನಾಶ. ಇದೆಲ್ಲದರಾಚೆ ಪರಿಸರವನ್ನು ಉಳಿಸಿ ಬೆಳೆಸುವ ಪರಿಸರ ಪ್ರೇಮವನ್ನು ನಾವೆಲ್ಲ ರೂಢಿಸಿಕೊಳ್ಳಬೇಕು, ಪರಿಸರ ಸ್ನೇಹಿ ಇಂಧನ ಬಳಸುವುದು ಪರ್ಯಾಯ ಶಕ್ತಿ ಮೂಲಗಳನ್ನು ಆಶ್ರಯಿಸುವುದು, ಪರಿಸರ ಸ್ನೇಹಿ ಜೀವನ ಶೈಲಿಯನ್ನು ರೂಢಿಸಿಕೊಳ್ಳುವುದು, ಶಾಲಾ ಕಾಲೇಜುಗಳ ಪಠ್ಯಕ್ರಮದಲ್ಲಿ ಪರಿಸರ ಜಾಗೃತಿ ಮೂಡಿಸುವ ಪರಿಕಲ್ಪನೆಗಳನ್ನು ತಿಳಿಸುವುದು, ವನಮಹೋತ್ಸವ ಪರಿಸರ ದಿನಾಚರಣೆ ಆಚರಿಸುವ ಮೂಲಕ ಮಕ್ಕಳಿಗೆ ಪರಿಸರ ಪ್ರೇಮವನ್ನು ಬೆಳೆಸಿ ಪರಿಸರ ಜಾಗೃತಿಯನ್ನು ಮೂಡಿಸುವುದು ,ಹೆಚ್ಚು ಹೆಚ್ಚು ಗಿಡಮರಗಳನ್ನು ಬೆಳೆಸುವಲ್ಲಿ ಪ್ರೋತ್ಸಾಹಿಸುವುದು ,ಪರಿಸರ ಸಂರಕ್ಷಣೆಗಾಗಿ ಹೋರಾಡಿದ ಮಹನೀಯರ ನಿಸ್ವಾರ್ಥ ಸೇವೆಯನ್ನು ನೆನೆಯುವುದು ಹಾಗೂ ಅವರ ಆದರ್ಶಗಳನ್ನು ನಮ್ಮ ಬದುಕಿನಲ್ಲಿ ಪ್ರಾಯೋಗಿಕವಾಗಿ ಪಾಲಿಸುವುದು.

ಪರಿಸರ ಪ್ರೇಮಿ ಸಾಲು ಸಾಲು ಮರವನ್ನು ನೆಟ್ಟ “ಸಾಲುಮರದ ತಿಮ್ಮಕ್ಕ” ಸುಂದರ್ಲಾಲ್ ಬಹುಗುಣ ಮೇಧಾ ಪಾಟ್ಕರ್ ಮುಂತಾದ ಪರಿಸರ ಪ್ರೇಮಿಗಳ ಕಾರ್ಯವೈಖರಿಗಳನ್ನು ಮಕ್ಕಳಿಗೆ ತಿಳಿಸುವುದು ಹಾಗೂ ಪ್ರತಿಯೊಬ್ಬ ನಾಗರಿಕರು ಅದನ್ನು ಅನುಸರಿಸುವುದು. “ಸರಳ ಬದುಕಿನಲ್ಲಿ ಸುಂದರತೆ ಇದೆ “ಎಂಬ ಸತ್ಯವನ್ನು ಅರ್ಥೈಸಿ ಕೊಳ್ಳುತ್ತಾ “ಪರಿಸರ ಉಳಿದರೆ ನಾವು ಉಳಿಯಲು ಸಾಧ್ಯ” ಎಂಬ ಅಂಶವನ್ನು ಅರ್ಥೈಸಿಕೊಂಡಾಗ ಪರಿಸರ ಕಾಳಜಿ ಪ್ರತಿಯೊಬ್ಬ ನಾಗರಿಕನ ಮಹತ್ವದ ಜವಾಬ್ದಾರಿ ಆಗುತ್ತದೆ. ಪರಿಸರ ದಿನದ ಸ್ಮರಣೆ , ಹಾಗೂ ಪರಿಸರ ಸಂರಕ್ಷಣೆಯ ಹೊಣೆಗಾರಿಕೆ ನಮ್ಮೆಲ್ಲರ ಅಸ್ತಿತ್ವದ ಸಂಕೇತವಾಗಿದೆ.

(ಜೂನ್ 5 ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಈ ಲೇಖನ )

ಪ್ರೊ ಸುಧಾ ಹುಚ್ಚಣ್ಣವರ ಉಪನ್ಯಾಸಕರು
ಎಫ್ಎಂ ಡಬಾಲಿ ಪಿಯು ಕಾಲೇಜ್ ಶಿರಹಟ್ಟಿ
ಜಿಲ್ಲೆ: ಗದಗ.

Advertisement
Share this on...