“ಪತ್ರಿಕೆಗಳು ಜ್ಞಾನ ಸಿರಿಯ ಆಕರಗಳು.

in ಕನ್ನಡ ಮಾಹಿತಿ 157 views

(” ಮೇ 3 ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ”ದ ನಿಮಿತ್ತ ಈ ಲೇಖನ )

Advertisement

ಪ್ರತಿ ನಿತ್ಯ ನಮ್ಮ ಮನೆಯಂಗಳಕ್ಕೆ ಮನದಂಗಳಕ್ಕೆ ಸುದ್ದಿ ಸಮಾಚಾರಗಳನ್ನು ತಂದುಕೊಡುವ ಪತ್ರಿಕೆಗಳು ನಮ್ಮ ನಿಜವಾದ ಜ್ಞಾನ ಸಿರಿಯ ಆಕರಗಳಾಗಿವೆ, ಇಡೀ ವಿಶ್ವಾದ್ಯಂತ ನಡೆಯುವ ವಿದ್ಯಮಾನಗಳನ್ನು ಪ್ರತಿನಿತ್ಯ ಜಗತ್ತಿನ ಮೂಲೆ ಮೂಲೆಗೂ ತಲುಪಿಸುವ ಕಾರ್ಯವನ್ನು ಮಾಡುತ್ತಿವೆ ಹಾಗೂ ಸೂರ್ಯನುದಯದ ಜೊತೆಗೆ ಪ್ರತಿಯೊಬ್ಬರ ದಿನದ ಆರಂಭ ಚಹಾ ಕಾಫಿಗಳ ಜೊತೆಗೆ ದಿನನಿತ್ಯದ ಸುದ್ದಿ ಸಮಾಚಾರವನ್ನು ಹೊತ್ತು ತರುವ ಪತ್ರಿಕೆಗಳನ್ನು ಓದುವುದರೊಂದಿಗೆ ಆರಂಭವಾಗುತ್ತದೆ.ಬಹಳಷ್ಟು ಜನಕ್ಕೆ ಪತ್ರಿಕೆಗಳನ್ನೊದದ್ದಿದ್ದರೆ ದಿನ ಆರಂಭವಾದಂತೆ ಅನ್ನಿಸುವುದಿಲ್ಲ.ಆಧುನಿಕ ಮಾನವನ ಜೀವನ ಶೈಲಿಯಲ್ಲಿ ವೃತ್ತಪತ್ರಿಕೆಗಳು ಹಾಸುಹೊಕ್ಕಾಗಿವೆ.

Advertisement

 

Advertisement

Advertisement

 

ಪತ್ರಿಕೆಗಳು ಮುಖಪುಟದಿಂದ ಹಿಡಿದು ಅಂತ್ಯದ ಪುಟದವರೆಗೂ ವಿಭಿನ್ನವಾದ ಮಾಹಿತಿಯನ್ನು ಓದುಗರಿಗೆ ನೀಡುತ್ತಾ ಹೋಗುತ್ತವೆ. ವಿಶ್ವದ ರಾಷ್ಟ್ರದ ರಾಜ್ಯದ ಪ್ರಾದೇಶಿಕವಾಗಿರುವ ಕೆಲವೊಂದಿಷ್ಟು ಮಹತ್ವದ ವಿಷಯಗಳನ್ನು ಮುಖ್ಯಾಂಶಗಳಲ್ಲಿ ನೀಡುತ್ತಾ ಅದರ ಸಂಪೂರ್ಣ ವಿವರಣೆಯನ್ನು ನೀಡುತ್ತವೆ. ದೈನಂದಿನ ಆಗು ಹೋಗುಗಳನ್ನು ಹಿಂದಿನ ದಿನದ ಸಮಾಚಾರಗಳನ್ನು ಭವಿಷ್ಯದ ಕುರಿತು ಪರಿಕಲ್ಪನೆಗಳ ಮಾಹಿತಿಯನ್ನು ಕೊಡುತ್ತವೆ. ವಾರದ ಕೆಲವೊಂದು ದಿನಗಳಲ್ಲಿ ವಿಶೇಷ ಪುರವಣಿಗಳನ್ನು ಸಂಚಿಕೆಗಳನ್ನು ವೈವಿಧ್ಯಮಯ ವಿಚಾರಗಳನ್ನು ನೀಡುತ್ತವೆ.ಕಲೆ ಸಾಹಿತ್ಯ ಸಂಸ್ಕೃತಿ ವೈಜ್ಞಾನಿಕತೆ ತಾಂತ್ರಿಕತೆ ಪ್ರಚಲಿತ ವಿದ್ಯಮಾನಗಳು ವಿಮರ್ಶಾತ್ಮಕ ವರದಿಗಳು ಸಮಾಜಮುಖಿಯಾಗಿ ಜಾಗೃತಿ ಮೂಡಿಸುವ ಕೆಲವೊಂದಿಷ್ಟು ಸಮಯೋಚಿತ ಲೇಖನಗಳು ಹೀಗೆ ಹತ್ತು ಹಲವಾರು ವಿಷಯಗಳು ಇರುತ್ತವೆ.

 

 

ಪತ್ರಿಕೆಗಳು ಸಹೃದಯ ಓದುಗರ ಅಭಿಪ್ರಾಯಗಳಿಗೂ ಮನ್ನಣೆ ನೀಡುತ್ತವೆ. ವಾಚಕರಿಗೆ ಕೆಲವೊಂದಿಷ್ಟು ಅಂಕಣಗಳನ್ನು ಮೀಸಲಿಟ್ಟಿರುತವೆ. ನಾವು ಇತಿಹಾಸದ ಪುಟವನ್ನು ತಿರುವಿ ನೋಡಿದಾಗ ಕೆಲವೊಂದಿಷ್ಟು ಸನ್ನಿವೇಶಗಳಲ್ಲಿ ಪತ್ರಿಕೆಗಳ ಪಾತ್ರ ಅಪಾರವಾಗಿದೆ ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದ ಜನರಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಮೂಡಿಸುವಲ್ಲಿ ಅಂದು ಪತ್ರಿಕೆಗಳು ವ್ಯಾಪಕವಾಗಿ ತಮ್ಮ ಕಾರ್ಯವನ್ನು ನಿರ್ವಹಿಸಿದ್ದವು. ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಬಾಲಗಂಗಾಧರ್ ತಿಲಕ್ ಅವರು ಹೀಗೆ ಸ್ವತಃ ಪತ್ರಿಕೆಗಳನ್ನು ಹೊರತಂದು ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದರು. ಪತ್ರಿಕೆಗಳ ಇತಿಹಾಸ ಸುದೀರ್ಘವಾಗಿದೆ “ಅಮೆರಿಕದ ನ್ಯೂಯಾರ್ಕ್ ಟೈಮ್ಸ್” ದಿನಪತ್ರಿಕೆ ನೂರಕ್ಕೂ ಹೆಚ್ಚು ಪುಟಗಳ ಪತ್ರಿಕೆಯಾಗಿ ಪ್ರಕಟವಾಗುತ್ತಿರುವುದು ಸಂತಸದ ಸಂಗತಿಯಾಗಿದೆ.

 

 

ಭಾರತದಲ್ಲಿಯೂ ಸಹ 1780 ರಲ್ಲಿ ಕೊಲ್ಕೊತ್ತಾದಿಂದ “ಬೆಂಗಾಲ್ ಗೆಜೆಟ್” ಎಂಬ ಪತ್ರಿಕೆ ಹೊರ ಬಂದಿತ್ತು.ಹಾಗೆಯೇ ದಿ ಹಿಂದೂ ಎಂಬ ಪತ್ರಿಕೆ ಬಹುಕಾಲದಿಂದ ಪ್ರಕಟಣೆಯಲ್ಲಿರುವ ಪತ್ರಿಕೆ ಹೀಗೆ ಪತ್ರಿಕಾ ಪ್ರಪಂಚದಲ್ಲಿ ಉತ್ತಮವಾದ ಬೆಳವಣಿಗೆಯನ್ನು ಕಂಡಿದ್ದೇವೆ. ಯಾವುದೇ ಪತ್ರಿಕೆ ಇರಲಿ ಅದು ಕೊಡುವ ಸುದ್ದಿ ಸಮಾಚಾರಗಳು ವರದಿ ಮಾಹಿತಿ ಎಲ್ಲವೂ ಪ್ರಾಮಾಣಿಕವೂ ಸತ್ಯ ನಿಷ್ಟವೂ ಆಗಿರಬೇಕು.

 

 

 

ಪ್ರತಿ ವರ್ಷ” ಮೇ 3″ ರಂದು ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ ಎಂದು ನೆನಪಿಸಿಕೊಳ್ಳುತ್ತೇವೆ. ಈ ದಿನದ ಉದ್ದೇಶ ಯಾವುದೇ ಪತ್ರಿಕೆ ಇರಲಿ ಆ ಪತ್ರಿಕೆಯು ಸತ್ಯ ಸಂಗತಿಗಳನ್ನು ಪ್ರಕಟಿಸಲು ಸ್ವಾತಂತ್ರ್ಯವಿರಬೇಕು ಇಡೀ ಸಮುದಾಯವನ್ನು ಉತ್ತಮ ದಾರಿಯಲ್ಲಿ ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ಕಳಕಳಿ ಪತ್ರಿಕೆ ಯದ್ದಾಗಿದೆ.ಪತ್ರಿಕೆಗಳು ಕೊಡುವ ಸುದ್ದಿ ಸಮಾಚಾರಗಳು ಯಾವುದೇ ಜಾತಿ ಜನಾಂಗ ಧರ್ಮ ಅಥವಾ ಯಾವುದೇ ರಾಜಕೀಯ ಪಕ್ಷ ಹೀಗೆ ಇದ್ಯಾವುದಕ್ಕೂ ಸೀಮಿತವಾಗದೆ ಮುಕ್ತವಾಗಿ ಕರಾರುವಕ್ಕಾಗಿ ನಿರ್ಭೀತಿಯಿಂದ ಸತ್ಯ ಸಂಗತಿಗಳನ್ನು ಹೇಳುವಂತಿರಬೇಕು ಇದನ್ನೇ “ಪತ್ರಿಕಾ ಸ್ವಾತಂತ್ರ್ಯ” ಅಥವಾ “ಪ್ರೆಸ್ ಫ್ರೀಡಂ” ಎಂದು ಕರೆಯುವರು.
ರಾಷ್ಟ್ರಕವಿ ಕುವೆಂಪುರವರು ಹೇಳುವ ಹಾಗೆ “ಓದಿ ಬೋಧಕನಾಗು
ಖಾದಿ ಯೋಧನೆ ಆಗು
ಶ್ರಮಿಕ ಧನಿಕನೆ ಆಗು
ದುಡಿದು ಗಳಿಸಿ
ಏನಾದರೂ ಆಗು
ನಿನ್ನೊಲವಿನ೦ತಾಗು ಏನಾದರೂ ಸರಿಯೇ ಮೊದಲು ಮಾನವನಾಗು”

 

 

ಹೀಗೆ ಇವರ ವಿಚಾರ ಧಾರೆಯಂತೆ ಪ್ರಪಂಚದಲ್ಲಿ ಪ್ರತಿಯೊಬ್ಬರ ಸ್ಥಾನಮಾನಗಳು ಏನೇ ಇರಬಹುದು ನಾವು ಮನುಷ್ಯರಾಗಿ ಮನುಷ್ಯತ್ವದಿಂದ ಬದುಕಲು ಪ್ರತಿನಿತ್ಯ ಅತ್ಯಮೂಲ್ಯ ಸುದ್ದಿ ಸಮಾಚಾರಗಳನ್ನು ಮೌಲಿಕ ವಿಚಾರಗಳನ್ನು ಕೊಡುವ ದಿನಪತ್ರಿಕೆಗಳ ಪಾತ್ರ ಅಪಾರವಾದದ್ದು. ಪತ್ರಿಕಾ ಸ್ವಾತಂತ್ರ್ಯದ ದಿನ ನೆನಪಿಸಿ ಕೊಳ್ಳುವುದೆಂದರೆ ಪ್ರತಿಯೊಬ್ಬ ಪತ್ರಕರ್ತರು ತಮ್ಮ ಕರ್ತವ್ಯ ಪರತೆ ತಾವು ಪ್ರಕಟಿಸುವ ಸತ್ಯ ವರದಿ ಕೆಲವೊಂದಿಷ್ಟು ಸಮಾಜದಲ್ಲಿ ನಡೆಯುವ ಅನ್ಯಾಯ ಅಕ್ರಮಗಳೆ ನಾದರೂ ಕಂಡು ಬಂದಲ್ಲಿ ಯಾವುದರ ಮುಲಾಜಿಲ್ಲದೆ ಮುಚ್ಚುಮರೆಯಿಲ್ಲದೆ ಪ್ರಕಟಿಸುವುದು ಅವರ ಒಂದು ಪತ್ರಿಕಾ ವೃತ್ತಿ ಧರ್ಮವಾಗಿದೆ.

 

 

 

ಎಕನಾಮಿಕ್ ಟೈಮ್ಸ್ ಕೊಟ್ಟ ವರದಿಯ ಪ್ರಕಾರ ಇಂದು ಇಡೀ ವಿಶ್ವವೇ ಕರೋನಾ ವೈರಸ್ ನಂತಹ ಸಾಂಕ್ರಾಮಿಕ ರೋಗದ ಪರಿಣಾಮದಿಂದ ತಲ್ಲಣಗೊಂಡಿದೆ, ಜನಜೀವನ ವಿಚಲಿತವಾಗಿದೆ ಇಂತಹ ಪರಿಸ್ಥಿತಿಯಲ್ಲಿ ಪತ್ರಿಕಾ ರಂಗವು ಸಹ ನಷ್ಟದಲ್ಲಿದೆ.ಆದರೆ ಇಷ್ಟೆಲ್ಲ ಆರ್ಥಿಕ ಸಂಕಷ್ಟದಲ್ಲಿದ್ದರೂ ಇಡೀ ಪತ್ರಿಕಾ ಬಳಗವು ಕಾರ್ಯಪ್ರವೃತ್ತವಾಗಿ ಪ್ರತಿಯೊಬ್ಬರ ಜನರ ಮನೆ ಬಾಗಿಲಿಗೆ ಸುದ್ದಿ ಸಮಾಚಾರಗಳನ್ನು ತಲುಪಿಸುವ ಕಾರ್ಯ ನಿರಂತರವಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಇಡೀ ಪತ್ರಿಕಾ ಬಳಗದವರ ಕಾರ್ಯ ಶ್ಲಾಘನೀಯವಾದದ್ದು . ಪತ್ರಿಕಾ ಬಳಗದ ಸಮಾಜಮುಖಿ ಕಾರ್ಯ ನಿರಂತರವಾಗಿರಲಿ ಎಂದು ಹಾರೈಸುತ್ತಾ ನಮ್ಮೆಲ್ಲ ಆತ್ಮೀಯ ಪತ್ರಿಕಾ ಬಾಂಧವರಿಗೆ ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನದ ಶುಭಾಶಯಗಳು.

 

ಪ್ರೊ ಸುಧಾ ಹುಚ್ಚಣ್ಣವರ ಉಪನ್ಯಾಸಕರು
ಎಫ್ಎಂ ಡಬಾಲಿ ಕಾಲೇಜು ಶಿರಹಟ್ಟಿ .
ಜಿಲ್ಲೆ: ಗದಗ
All Rights Reserved Namma Kannada.

Advertisement
Share this on...