ಎಷ್ಟು ಕತ್ತೆ ವಯಸ್ಸಾಗಿದ್ಯೋ ಗೊತ್ತಿಲ್ಲ..ಭಟ್ಟರು ತಮಗೆ ತಾವೇ ಹೀಗೆ ಹೇಳಿಕೊಂಡಿದ್ದೇಕೆ..?

in ಮನರಂಜನೆ/ಸಿನಿಮಾ 106 views

ಯಾರಿಗಾದರೂ ಬೈಯ್ಯುವ ಭರದಲ್ಲಿ ನಿನಗೆ ಮೂರು ಕತ್ತೆ ವಯಸ್ಸಾಗಿದೆ ಎನ್ನುವುದು ಸಾಮಾನ್ಯ. ಈ ಮಾತು ಕೆಲವರಿಗೆ ಅವಮಾನ ಮಾಡಿದಂತೆ ಎಂದರೂ ತಪ್ಪಿಲ್ಲ ಬಿಡಿ. ಆದರೆ ಇದೀಗ ಯೋಗರಾಜಭಟ್ಟರು ತಮಗೆ ತಾವೇ ಈ ಮಾತು ಹೇಳಿಕೊಂಡಿದ್ದಾರೆ. ಅಂದ ಹಾಗೆ ನಿನ್ನೆ ಯೋಗರಾಜ ಭಟ್​​​​​ 48ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಕೊರೊನಾ ಕಾರಣದಿಂದ ಕುಟುಂಬದವರೊಂದಿಗೆ ಭಟ್ಟರು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇದರ ಜೊತೆಗೆ ಸ್ನೇಹಿತರು ಪ್ರೀತಿಯಿಂದ ತಂದ ಕೇಕ್ ಕಟ್ ಮಾಡಿದ್ದಾರೆ. ತಮಗೆ ಹುಟ್ಟುಹಬ್ಬದ ಶುಭ ಕೋರಿದವರಿಗೆ ಭಟ್ಟರು ಸೋಷಿಯಲ್ ಮೀಡಿಯಾದಲ್ಲಿ ಸ್ವಲ್ಪ ವಿಭಿನ್ನವಾಗೇ ಧನ್ಯವಾದ ಅರ್ಪಿಸಿದ್ದಾರೆ. “ನನ್ನ ಹುಟ್ದಬ್ಬ..ಎಷ್ಟು ಕತ್ತೆ ವಯಸ್ಸಾಯ್ತು ಗೊತ್ತಿಲ್ಲ..ಆನಂದ.. ಧಾವಂತ.. ಗಡಿಬಿಡಿ..ವಿಪರೀತ ಕೆಲಸ..ಏನೋ ನೆಮ್ಮದಿ..ಎಲ್ರಿಗೂ ನಮನ + ಧನ್ಯವಾದ” ಎಂದು ಬರೆಯುವ ಮೂಲಕ ಧನ್ಯವಾದ ಅರ್ಪಿಸಿದ್ದಾರೆ. ಭಟ್ಟರ ಈ ವಿಭಿನ್ನ ನುಡಿಗಳು ಇದು ಮೊದಲಲ್ಲ. ಅವರ ಬಹಳಷ್ಟು ಸಿನಿಮಾ ಡೈಲಾಗ್​ಗಳು ಹೀಗೆ ಇರುತ್ತವೆ.

Advertisement

Advertisement

ಉಡುಪಿ ಜಿಲ್ಲೆಯ ಮಂಧಾರ್ತಿಯಲ್ಲಿ ರಾಮಚಂದ್ರ ಹಾಗೂ ಜಯಲಕ್ಷ್ಮಿ ದಂಪತಿಗೆ ಜನಿಸಿದ ಯೋಗರಾಜ್ ಭಟ್​​​ಗೆ ಚಿಕ್ಕಂದಿನಲ್ಲೇ ಸಿನಿಮಾ, ಬರಹದ ಮೇಲೆ ಆಸಕ್ತಿ. ವಿದ್ಯಾಭ್ಯಾಸ ಮುಗಿಸಿ ಬೆಂಗಳೂರಿಗೆ ಬಂದ ಭಟ್ಟರು ‘ಸಾಧನೆ’ ಎಂಬ ಧಾರಾವಾಹಿಗೆ ರೈಟರ್ ಹಾಗೂ ಎಪಿಸೋಡ್ ಡೈರೆಕ್ಟರ್ ಆಗಿ ಕೆಲಸ ಮಾಡಿದರು. ಈ ಧಾರಾವಾಹಿಗೆ ಬೆಸ್ಟ್ ಸೀರಿಯಲ್ ಅವಾರ್ಡ್ ಕೂಡಾ ದೊರೆಯಿತು. ನಂತರ 2001 ರಲ್ಲಿ ‘ಚಕ್ರ’ ಎಂಬ ಧಾರಾವಾಹಿಯನ್ನು ಭಟ್ಟರು ನಿರ್ದೇಶಿಸಿದರು. ಸುಮಾರು 5 ವರ್ಷಗಳು ಕಿರುತೆರೆಯಲ್ಲಿ ಕೆಲಸ ಮಾಡಿದ ಭಟ್ಟರು ನಂತರ ಬೆಳ್ಳಿತೆರೆ ಪ್ರವೇಶಿಸಿದರು. ಅಲ್ಲಿಂದ ಖ್ಯಾತ ಸಿನಿಮಾಟೋಗ್ರಾಫರ್ ರಾಮಚಂದ್ರ ಅವರ ಬಳಿ ಅಸಿಸ್ಟಂಟ್ ಆಗಿ ಕೆಲವು ದಿನಗಳ ಕಾಲ ಕೆಲಸ ಮಾಡಿದರು. ಅಲ್ಲಿಂದ ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು.

Advertisement

2003 ರಲ್ಲಿ ಮಯೂರ್ ಪಟೇಲ್ ಹಾಗೂ ರಾಧಿಕಾ ಕುಮಾರಸ್ವಾಮಿ ಜೋಡಿಯಾಗಿ ನಟಿಸಿದ್ದ ‘ಮಣಿ’ ಚಿತ್ರದ ಮೂಲಕ ಸ್ವತಂತ್ರ್ಯ ನಿರ್ದೇಶಕರಾಗಿ ಕೆಲಸ ಆರಂಭಿಸಿದರು. 2004 ರಲ್ಲಿ ಸುದೀಪ್ ಹಾಗೂ ರಮ್ಯ ನಟನೆಯ ‘ರಂಗ ಎಸ್​​​ಎಸ್​​ಎಲ್​ಸಿ’ ಚಿತ್ರವನ್ನು ನಿರ್ದೇಶಿಸಿದರು. ಆದರೆ ಭಟ್ಟರಿಗೆ ದೊಡ್ಡ ಬ್ರೇಕ್ ನೀಡಿದ ಚಿತ್ರ 2006 ರಲ್ಲಿ ಬಿಡುಗಡೆಯಾದ ‘ಮುಂಗಾರು ಮಳೆ’. ಈ ಚಿತ್ರದ ಮೇಕಿಂಗ್, ಹಾಡುಗಳು ಅಭಿಮಾನಿಗಳಿಗೆ ಹುಚ್ಚು ಹಿಡಿಸಿತು. ಈ ಸಿನಿಮಾ ಭಟ್ಟರಿಗೆ ಮಾತ್ರವಲ್ಲದೆ ಗಣೇಶ್​​ಗೂ ಸ್ಟಾರ್ ಪಟ್ಟ ತಂದು ನೀಡಿತು. ಅಲ್ಲಿವರೆಗೂ ಧಾರಾವಾಹಿಗಳಲ್ಲಿ ನಟಿಸುತ್ತಾ. ಉದಯ ಟಿವಿಯಲ್ಲಿ ಕಾಮಿಡಿ ಟೈಂ ಕಾರ್ಯಕ್ರಮ ಮಾಡುತ್ತಿದ್ದ ಗಣೇಶ್ ‘ತುಂಟಾಟ’ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಬಂದರು. ಆದರೆ ಆ ಚಿತ್ರ ಅಷ್ಟೇನೂ ಯಶಸ್ಸು ನೀಡಲಿಲ್ಲ. ಆದರೆ ಯೋಗರಾಜ್​ ಭಟ್ಟರೊಂದಿಗೆ ಮಾಡಿದ ಸಿನಿಮಾ ಅವರಿಗೆ ಗೋಲ್ಡನ್ ಸ್ಟಾರ್ ಪಟ್ಟ ನೀಡಿತು.

Advertisement

ಯೋಗರಾಜ ಭಟ್ಟರು ನಿರ್ದೇಶನ ಮಾತ್ರವಲ್ಲದೆ ಅನೇಕ ಸಿನಿಮಾಗಳಿಗೆ ಸಾಹಿತ್ಯ ಕೂಡಾ ಬರೆದಿದ್ದಾರೆ. 4-5 ಸಿನಿಮಾಗಳಲ್ಲಿ ಆ್ಯಕ್ಟಿಂಗ್ ಕೂಡಾ ಮಾಡಿದ್ದಾರೆ. ಬಹುಮುಖ ಪ್ರತಿಭೆಯಾಗಿರುವ ಭಟ್ಟರು ಕಾಮಿಡಿ ಕಿಲಾಡಿಗಳು ಜಡ್ಜ್ ಆಗಿದ್ದಾರೆ. ಜೊತೆಗೆ ಗಾಳಿಪಟ-2 ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಭಟ್ಟರು ಚಿತ್ರರಂಗಕ್ಕೆ ಮತ್ತಷ್ಟು ಒಳ್ಳೆ ಸಿನಿಮಾಗಳನ್ನು ನೀಡುವಂತಾಗಲಿ ಎಂಬುದೇ ನಮ್ಮ ಹಾರೈಕೆ.

Advertisement
Share this on...